ಹಿಜಾಬ್​ ವಿಷ್ಯದಲ್ಲಿ ಗಲಾಟೆ: ಕಾಣದ ಕೈಗಳಿಗೆ ಶಾಸಕ ಖಾದರ್​ ನೀಡಿದ್ರು ಶಾಕ್​! ಅವರು ಹೇಳಿದ್ದೇನು ಕೇಳಿ...

1285843
Published on

ಮಂಗಳೂರು: ಸರ್ಕಾರದ ನಿಯಮ, ಹೈಕೋರ್ಟ್​ನ ಆದೇಶ ಎಲ್ಲವುಗಳ ಹೊರತಾಗಿಯೂ ಕೆಲವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ಗಾಗಿ ಉದ್ದೇಶಪೂರ್ವಕವಾಗಿ ಪ್ರತಿಭಟನೆ, ಗಲಾಟೆಗಳು ನಡೆಯುತ್ತಿವೆ. ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್ ತೀಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

'ಭಾರತದಲ್ಲಿದ್ದು ಗಲಾಟೆ ಮಾಡುತ್ತಿದ್ದೀರಿ. ನೀವು ಒಮ್ಮೆ ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ಹೋಗಿ ಬರಬೇಕಿದೆ. ಆಗ ನಮ್ಮ ದೇಶದ ಸ್ವಾತಂತ್ರ್ಯ, ಮಹತ್ವದ ಅರಿವಾಗುತ್ತದೆ. ಕೆಲ ಸ್ಥಾಪಿತ ಹಿತಾಸಕ್ತಿಗಳು ಹಿಜಾಬ್ ಸಮಸ್ಯೆ ಬಗೆಹರಿಸದೇ ಜೀವಂತವಾಗಿ ಇಡಲು ಯತ್ನಿಸುತ್ತಿವೆ. ಕೆಲವರು ಘಟನೆ ದುರ್ಲಾಭ ಪಡೆದು ತಮ್ಮ ವಿಕೃತ ಮನಸ್ಸು ಪ್ರದರ್ಶಿಸುತ್ತಿದ್ದಾರೆ ಎಂದು ಖಾದರ್​ ತರಾಟೆಗೆ ತೆಗೆದುಕೊಂಡಿದ್ದಾರೆ.

ಹಿಜಾಬ್ ವಿಚಾರದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಯಾವ ರೀತಿಯ ಸಹಕಾರ ನೀಡಬೇಕೋ ಅದನ್ನು ನಾನು ಮಾಡಿದ್ದೇನೆ. ಇದರಲ್ಲಿ ಕಾನೂನಿನ ಸಮಸ್ಯೆ ಇರುವುದರಿಂದ ಕಾನೂನು ಪ್ರಕಾರವೇ ಪ್ರಶ್ನೆ ಮಾಡಬೇಕಾಗುತ್ತದೆ. ಅದು ಬಿಟ್ಟು ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಅವಕಾಶ ನೀಡಬಾರದು ಎಂದು ಹೇಳಿದರು.

ನಾನು ಹಿಜಾಬ್ ಧರಿಸುವ ಸಹೋದರಿಯರಿಗೆ ಯಾವುದೇ ಮಾತು ಹೇಳುತ್ತಿಲ್ಲ. ನನ್ನ ಮಗಳೂ ಹಿಜಾಬ್​ ಧರಿಸುತ್ತಾಳೆ. ಆದರೆ ಶಿಕ್ಷಣವನ್ನು ಧಿಕ್ಕರಿಸಿ ಹಿಜಾಬ್ ಗಾಗಿ ಹಠ ಹಿಡಿದು ಸಮಾಜದಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಎನ್ನುವುದು ನನ್ನ ಆಶಯ. ಕಾನೂನಿಗೆ ಗೌರವ ಕೊಡದೇ ತಮ್ಮ ವ್ಯಕ್ತಿತ್ವ ಪ್ರದರ್ಶಿಸ್ತಾ ಇರುವುದು ದುರದೃಷ್ಟಕರ. ಭಾರತ ದೇಶದ ಕಾನೂನು, ಸಂಸ್ಕೃತಿ ಮತ್ತು ಸೌಂದರ್ಯ ‌ನಮಗೆ ಗೊತ್ತಾಗಬೇಕಾದ ಅಂಥವರು ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ ಸೌದಿಗೆ ಹೋಗಿ ಬರಬೇಕಿದೆ ಎಂದರು.

ಹಿಜಾಬ್ ವಿಚಾರದಲ್ಲಿ ಕಾನೂನಿನ ಸಮಸ್ಯೆಯಿದ್ದರೆ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಅದು ಬಿಟ್ಟು ಕಾನೂನಿನ ಹೊರಗೆ ಸಮಸ್ಯೆಗೆ ಪರಿಹಾರ ಸಿಗಲ್ಲ. ಜಿಲ್ಲೆಯ ಸಾಂವಿಧಾನಿಕ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಸೂಕ್ತ ನಿರ್ದೇಶನ ನೀಡಬೇಕು. ಶಿಕ್ಷಣಕ್ಕೆ ಯಾವುದೇ ಅಡ್ಡಿ ಬರಬಾರದು ಎಂದು ಧಾರ್ಮಿಕ ಮುಖಂಡರು ಹೇಳಿದ್ದಾರೆ. ಸಮಸ್ಯೆ ಬಂದಾಗ ಸಂಧಾನದ ಮೂಲಕ ಹೋಗಬೇಕು. ಸಂಧಾನ ಆಗದಿದ್ದರೆ ಕಾನೂನು ಹೋರಾಟ ಮಾಡಬೇಕು. ಇದನ್ನು ಹೊರತುಪಡಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಬಾರದು ಎಂದು ತಿಳಿಸಿದರು.

ಇದೇ ವೇಳೆ ಮಂಗಳೂರು ವಿವಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಖಾದರ್​, ಕಾಲೇಜಿನ ಕ್ಯಾಲೆಂಡರ್​ನಲ್ಲಿ ಸಮವಸ್ತ್ರದ ಜತೆ ಶಿರವಸ್ತ್ರಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಶೈಕ್ಷಣಿಕ ವರ್ಷದ ಮಧ್ಯೆ ಸಿಂಡಿಕೇಟ್ ಸಭೆ ನಡೆಸಿ ಹಿಜಾಬ್ ಹಾಕಬಾರದು ಎನ್ನುವ ತೀರ್ಮಾನ ಮಾಡಿದ್ದಾರೆ. ಶೈಕ್ಷಣಿಕ ವರ್ಷದ ನಡುವೆ ಇಂತಹ ನಿರ್ಧಾರ ಮಾಡಿದ್ದು ಸರಿಯಾ ಎನ್ನುವುದಕ್ಕೂ ಉತ್ತರ ಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net