

ಬೆಂಗಳೂರು/ಮೈಸೂರು: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯಲ್ಲಿನ ಕೆಲವು ಆತ್ಮಸಾಕ್ಷಿಯ ಮತಗಳು ಕಾಂಗ್ರೆಸ್‌ಗೆ ಬಂದೇ ಬರುತ್ತವೆ ಎಂದು ಮೈಸೂರಿನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಎಷ್ಟು ಮತಗಳು ಬೇಕೋ ಅಷ್ಟು ಆತ್ಮಸಾಕ್ಷಿಯ ಮತಗಳು ಜೆಡಿಎಸ್ ಹಾಗೂ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದೇ ಬರುತ್ತವೆ. ಬಿಜೆಪಿ ಈಗಲೂ ಗೆಲ್ಲಬಾರದು ಎಂಬ ಇಚ್ಛೆ ಜೆಡಿಎಸ್ಗೆ ಇದ್ದರೆ ಅವರ ಅಭ್ಯರ್ಥಿಯನ್ನ ಚುನಾವಣಾ ಕಣದಿಂದ ನಿವೃತ್ತಿ ಮಾಡಿಸಲಿ ಎಂದು ಮೈಸೂರಿನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆ (ಸೋಮವಾರ) ಹೇಳಿದ್ದರು.
ಅದರ ಬಗ್ಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದಾಗ, ಬೊಮ್ಮಾಯಿ ಒಂದು ಕ್ಷಣ ನಕ್ಕು, ಇಂತಹುವಕ್ಕೆಲ್ಲ ಪ್ರತಿಕ್ರಿಯಿಸಲ್ಲ ಎಂದರು. ಈ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಕುರಿತು ಶಾಸಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಬುಧವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದಷ್ಟೇ ಹೇಳಿ ಸುಮ್ಮನಾದರು.
ಆತ್ಮಸಾಕ್ಷಿ ಮತಗಳ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಅವರೊಬ್ಬರಿಗೆ ಆತ್ಮಸಾಕ್ಷಿ ಇರೋದಾ, ನಮಗ್ಯಾರಿಗೂ ಇಲ್ವಾ.? ಆತ್ಮಸಾಕ್ಷಿಯನ್ನು ಅವರೊಬ್ಬರಿಗೇ ಗುತ್ತಿಗೆ ಕೊಟ್ಟಿದ್ದೇವಾ. ಇದೇ 10ರಂದು ಬರುವ ಫಲಿತಾಂಶವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ತಿರುಗೇಟು ನೀಡಿದ್ದಾರೆ.