ಮೋದಿ ಎಂಬ ಸರ್‌ನೇಮ್‌... ಹೇಳಬಾರದ್ದು ಹೇಳಿ ಪೇಚಿಗೆ ಸಿಲುಕಿದ ರಾಹುಲ್‌ ಕೋರ್ಟ್‌ಗೆ ಹಾಜರ್‌

rahul-modi
Published on

ನವದೆಹಲಿ: 2019ರ ಚುನಾವಣಾ ರ‍್ಯಾಲಿ ಸಂದರ್ಭದಲ್ಲಿ ಮೋದಿ ಸರ್​ನೇಮ್​ ಕುರಿತಾಗಿ ಮಾನಹಾನಿಯಾಗುವ ಹೇಳಿಕೆ ನೀಡಿ ಪೇಚಿಗೆ ಸಿಲುಕಿರುವ ರಾಹುಲ್​ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಇವರ ವಿರುದ್ಧ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ದೂರು ದಾಖಲು ಮಾಡಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಸೂರತ್​ನ ಮ್ಯಾಜಿಸ್ಟ್ರೇಟ್ ಕೋರ್ಟ್‌ ಮಾನಹಾನಿಗೆ ಸಂಬಂಧಿಸಿದಂತೆ ಕೋರ್ಟ್‌ ಮುಂದೆ ಹಾಜರಾಗಲು ಆದೇಶಿಸಿತ್ತು. ಈ ಆದೇಶದ ಅನ್ವಯ ರಾಹುಲ್‌ ಗಾಂಧಿ ಇಂದು ಕೋರ್ಟ್‌ಗೆ ಹಾಜರು ಆಗಿದ್ದರು.

2019ರ ಲೋಕಸಭೆ ಚುನಾವಣೆ ವೇಳೆ ಭಾಷಣ ಮಾಡ್ತಿದ್ದ ರಾಹುಲ್ ಗಾಂಧಿ, ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂಬ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಹೆಸರು ಹೊಂದಿರುವವರನ್ನು ಉಲ್ಲೇಖಿಸಿದ್ದ ಅವರು, ಎಲ್ಲ ಮೋದಿಗಳೂ ಕಳ್ಳರು. ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು.

ಇದರಿಂದ ಸಿಟ್ಟಿಗೆದ್ದಿದ್ದ ಪೂರ್ಣೇಶ್​ ಮೋದಿ ದೂರು ದಾಖಲು ಮಾಡಿದ್ದರು. 2019ರ ಏಪ್ರಿಲ್​​​ ತಿಂಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್​​ 499 ಮತ್ತು 500ರ ಅಡಿ ಮಾನಹಾನಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಈಗ ಕೋರ್ಟ್‌ಗೆ ಹಾಜರು ಆಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಮೂರನೆಯ ಬಾರಿ ಕೋರ್ಟ್‌ಗೆ ರಾಹುಲ್‌ ಹಾಜರು ಆಗುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net