ರಾಗಿಣಿಗೆ ಸಿಗಲಿಲ್ಲ ಬೇಲ್​; ನಶೆ ನಟಿಯರಿಗೆ ಸಿಕ್ತು ಕರೊನಾ ರಿಸಲ್ಟ್​: ಏನಿದೆ ಗೊತ್ತಾ?

sanjana ragini
Published on

ಬೆಂಗಳೂರು : ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟಿ ರಾಗಿಣಿ ಜಾಮೀನು ಅರ್ಜಿಯನ್ನು ಇದೇ ತಿಂಗಳ 16 ಕ್ಕೆ ಕೋರ್ಟ್ ಮುಂದೂಡಿದೆ.

ಕಳೆದ 11 ದಿನಗಳಿಂದ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿಯವರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇವರ ಜತೆಗೆ, ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಇತರ ಆರೋಪಿಗಳಾದ ಶಿವಪ್ರಕಾಶ್,ರಾಹುಲ್ ,ವೈಭವ್ ಜೈನ್ ,ವಿನಯ್ ಕುಮಾರ್ ಅವರ ಅರ್ಜಿಯ ವಿಚಾರಣೆಯನ್ನೂ ಕೋರ್ಟ್​ ಮುಂದೂಡಿದೆ. ಸಂಜನಾ ಸದ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿಲ್ಲ.

ಇಂದು ವಿಚಾರಣೆ ಆರಂಭವಾಗುತ್ತಿದ್ದಂತೆ ಸಿಸಿಬಿ ಪರ ವಕೀಲರು ಜಾಮೀನನ್ನು ಈ ಹಂತದಲ್ಲಿ ನೀಡಬಾರದು ಎಂದು ಮನವಿ ಮಾಡಿಕೊಂಡರು. ಪ್ರಕರಣವು ತನಿಖಾ ಹಂತದಲ್ಲಿದೆ. ಆದ್ದರಿಂದ ಆರೋಪಿಗಳು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ತಮಗೆ ಅವಕಾಶ ನೀಡಬೇಕು ಎಂದು ಅವರು ಕೋರಿದರು.

ಇದನ್ನು ಕೋರ್ಟ್​ ಮಾನ್ಯ ಮಾಡಿತು. ವಿಚಾರಣೆಯನ್ನು 16ಕ್ಕೆ ಮುಂದೂಡಿ, ಅಂದು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಹೇಳಿದೆ.

ಕೋರ್ಟ್​ ಕಲಾಪಕ್ಕೂ ಮುನ್ನ ರಾಗಿಣಿ ಹಾಗೂ ಸಂಜನಾರನ್ನು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಕರೊನಾ ಪರೀಕ್ಷೆ ಕೂಡ ಮಾಡಿಸಲಾಯಿತು. ಇಬ್ಬರಿಗೂ ನೆಗೆಟಿವ್​ ಬಂದಿದೆ ಎಂದು ಮೂಲಗಳು ಹೇಳಿವೆ.

ಕೋರ್ಟ್​ ಕಲಾಪದ ನಂತರ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಬ್ಬರಿಗೆ ವಿಚಾರಣೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ. ಮಧ್ಯಾಹ್ನ 3 ಗಂಟೆಗೆ ಇಬ್ಬರನ್ನೂ ವಿಡಿಯೋ ಕಾನ್ಫರೆನ್ಸ್​ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net