ಪ್ರಯೋಗಾಲಯದಲ್ಲಿಯೇ ಕರೊನಾ ಸೃಷ್ಟಿ: ಚೀನಿಯರ ಕ್ರೌರ್ಯಕ್ಕೆ ಪುರಾವೆ ನೀಡುವೆ ಎಂದ ಚೀನಾದ ವೈರಾಲಾಜಿಸ್ಟ್​!

corona-china
Published on

ವುಹಾನ್​: ಇಡೀ ವಿಶ್ವವನ್ನೇ ಅಲ್ಲಾಡಿಸಿರುವ ಕರೊನಾ ವೈರಸ್​ನ ಉಗಮ ಸ್ಥಾನ ವುಹಾನ್​ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ಇದು ಅಲ್ಲಿಯ ವೆಟ್​ ಮಾರ್ಕೆಟ್​ನ ಪ್ರಾಣಿಗಳಿಂದಾಗಲೀ ಅಥವಾ ಇನ್ನಾವುದೇ ಪಶು-ಪಕ್ಷಿಗಳಿಂದಾಗಲೀ ಉಂಟಾದ ವೈರಸ್​ ಅಲ್ಲ, ಬದಲಿಗೆ ಚೀನಿಯರೇ ಪ್ರಯೋಗಾಲಯದಲ್ಲಿ ಸೃಷ್ಟಿ ಮಾಡಿ ವಿಶ್ವವನ್ನು ತಲ್ಲಣಗೊಳಿಸಿರುವುದಾಗಿ ಹಿಂದಿನಿಂದಲೂ ಹೇಳುತ್ತಾ ಬಂದಿರುವ ಚೀನಾದ ವೈರಾಲಜಿಸ್ಟ್ ಡಾ. ಲೀ-ಮೆಂಗ್, ಅದಕ್ಕೀಗ ವೈಜ್ಞಾನಿಕ ಪುರಾವೆಗಳನ್ನು ನೀಡಲು ಮುಂದಾಗಿದ್ದಾರೆ.

ಲೀ ಅವರು ಚೀನಾದ ಶಾಂಡಾಂಗ್‌ ಪ್ರಾಂತ್ಯದ ಕ್ವಿಂಗ್ಡಾವೊ ನಗರದ ವೈರಾಣು ತಜ್ಞೆ. ಹಾಂಗ್​ಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ವೈರಾಲಜಿ ಮತ್ತು ಇಮ್ಯುನೊಲಾಜಿಯಲ್ಲಿ ಪರಿಣತಿ ಹೊಂದಿದ್ದಾರೆ ಇವರು. ಈಕೆ ಕರೊನಾ ಸಂಶೋಧನೆ ಹಿಂದೆ ಬಿದ್ದ ಕಾರಣ ಚೀನಾದಿಂದ ಬಂಧನಕ್ಕೆ ಒಳಗಾಗುವ ಸುಳಿವು ಸಿಕ್ಕ ಕಾರಣದಿಂದ ಕಳೆದ ಏಪ್ರಿಲ್​ನಲ್ಲಿಯೇ ಹಾಂಕಾಂಗ್‌ ತೊರೆದು ಅಮೆರಿಕಕ್ಕೆ ಬಂದು ಗುಪ್ತವಾದ ಸ್ಥಳವೊಂದರಲ್ಲಿ ನೆಲೆಸಿದ್ದಾರೆ.

ಈ ಹಿಂದೆ ಕೂಡ ಸಾಕಷ್ಟು ಬಾರಿ ಕರೊನಾದ ರಹಸ್ಯವನ್ನು ಬಹಿರಂಗಪಡಿಸಿರುವ ಇವರು, ಇದೀಗ ತಾವು ಇದಕ್ಕೆಲ್ಲಾ ಆಧಾರ ನೀಡುವುದಾಗಿ ಹೇಳಿದ್ದಾರೆ. ತಾವು ಈ ಬಗ್ಗೆ ತನಿಖೆ ಶುರು ಮಾಡುತ್ತಿದ್ದಂತೆಯೇ ತಮ್ಮ ಮೇಲೆ ಚೀನಾ ಸರ್ಕಾರದ ಕಣ್ಣುಬಿದ್ದಿದ್ದು ಬಾಯಿ ಮುಚ್ಚಿಸುವ ಯತ್ನ ನಡೆದಿರುವ ಬಗ್ಗೆ ಅವರು ಹೇಳಿದ್ದಾರೆ.

'ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಚೀನಾದಲ್ಲಿ "ಹೊಸ ನ್ಯುಮೋನಿಯಾ" ಕುರಿತು ಎರಡು ಸಂಶೋಧನೆಗಳನ್ನು ನಡೆಸಿದ್ದೇನೆ ಮತ್ತು ಫಲಿತಾಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಾರರಾಗಿರುವ ತನ್ನ ಮೇಲ್ವಿಚಾರಕರೊಂದಿಗೆ ಹಂಚಿಕೊಂಡಿದ್ದೆ. ನನ್ನ ಮೇಲ್ವಿಚಾರಕ ವಿಶ್ವ ಆರೋಗ್ಯ ಸಂಸ್ಥೆಯ ಪರವಾಗಿ ಕೆಲಸ ಮಾಡುತ್ತಾರೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಅಚ್ಚರಿ ಎಂದರೆ ಅವರು ನನ್ನ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದರು, ಬಾಯಿ ಮುಚ್ಚದಿದ್ದರೆ, ಕಣ್ಮರೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ಅಲ್ಲಿಯೇ ಇದ್ದರೆ ನನ್ನ ಜೀವಕ್ಕೆ ಅಪಾಯ ಇದೆ ಎಂಬುದು ತಿಳಿದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಬಂದಿದ್ದೇನೆ' ಎಂದು ಲೀ ಹೇಳಿದ್ದಾರೆ.

ಕರೊನಾ ವೈರಸ್​ ಕುರಿತಂತೆ ಸಾಕಷ್ಟು ಅಧ್ಯಯನ ಮಾಡಿದ್ದೆನೆ. ಇದು ಪ್ರಕೃತಿಯಿಂದ ಬಂದದ್ದಲ್ಲ. ವುಹಾನ್​ ಮಾರುಕಟ್ಟೆಯಿಂದಲೂ ಬಂದಿದ್ದಲ್ಲ. ಬದಲಿಗೆ ಪ್ರಯೋಗಾಲಯದಲ್ಲಿ ಮಾಡಿರುವ ಮಾನವ ನಿರ್ಮಿತವಿದು ಎಂದಿದ್ದಾರೆ. ತಮ್ಮ ಪ್ರಯೋಗಾಲಯದಿಂದ ಕೆಲವು ವಿಜ್ಞಾನಿಗಳು ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರೀಕ್ಷೆಗೆ ಮನವಿ ಸಲ್ಲಿಸಿದಾಗಲೂ ಚೀನಾ ಸರ್ಕಾರ ಖಡಾಖಂಡಿತವಾಗಿ ಅದನ್ನು ತಿರಸ್ಕರಿಸಿತ್ತು. ಆದರೆ ಚೀನಾದಲ್ಲಿರುವ ತಜ್ಞ ಸ್ನೇಹಿತರು ಕರೊನಾ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದರು ಎಂದು ಯಾನ್‌ ಸ್ಪಷ್ಟಪಡಿಸಿದ್ದಾರೆ.

ಜಾಗತಿಕವಾಗಿ ವ್ಯಾಪಿಸುವ ಮೊದಲೇ ಚೀನಾಕ್ಕೆ ಆ ಮಾರಕ ವೈರಾಣುವಿನ ಬಗ್ಗೆ ಗೊತ್ತಿತ್ತು. ಈ ಸಂಗತಿಯನ್ನು ಮುಚ್ಚಿಹಾಕಲು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಈ ಬಗ್ಗೆ ನಾನು ಹಾಕಷ್ಟು ಅಧ್ಯಯನ ಕೈಗೊಂಡಿದ್ದು, ಸಾಕ್ಷ್ಯಾಧಾರ ಸಹಿತವಾಗಿ ಈ ವರದಿಗಳನ್ನು ಪ್ರಕಟಿಸಲಿದ್ದೇನೆ ಎಂದಿದ್ದಾರೆ ಲೀ. ಇದು ಚೀನಾ ಸರ್ಕಾರದ ಕುತಂತ್ರ ಎಂಬ ಬಗ್ಗೆ ಸಾಮಾನ್ಯ ಜನರು ಓದಿದರೂ ಅರ್ಥವಾಗುವಂತೆ ವರದಿ ಮಂಡನೆ ಮಾಡಲಿದ್ದೇನೆ ಎಂದಿದ್ದಾರೆ ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net