

ಬೆಂಗಳೂರು: ಕನ್ನಡದ ಕಣ್ಮಣಿ ಪುನೀತ್ ರಾಜ್‌ಕುಮಾರ್ ಎಲ್ಲರನ್ನೂ ಅಗಲಿ ಹಲವು ದಿನಗಳು ಕಳೆದರೂ ಬದುಕಿದ್ದಾಗ ಅವರು ಮಾಡಿರುವ ಸೇವೆ, ಅವರ ಜತೆಗಿನ ಒಡನಾಟದ ಕುರಿತಂತೆ ಇನ್ನೂ ಅನೇಕ ಮಂದಿ ಭಾವನಾತ್ಮಕವಾಗಿ ಮಾತನಾಡುತ್ತಲೇ ಇದ್ದಾರೆ. ಪುನೀತ್ ಅಭಿಮಾನಿಗಳು ಮಾತ್ರವಲ್ಲದೇ ಅವರ ಕುಟುಂಬಸ್ಥರು ಕೂಡ ತಮ್ಮ ಪ್ರೀತಿಯ ಅಪ್ಪುವಿನ ಕುರಿತು ಹಿಂದಿನ ಘಟನಾವಳಿಗಳನ್ನು ಮೆಲುಕು ಹಾಕುತ್ತಲೇ ಇದ್ದಾರೆ.
ಒಂದೊಮ್ಮೆ ತೀವ್ರ ಅನಾರೋಗ್ಯದಿಂದ ಚಿತ್ರರಂಗದಿಂದ ಬಹಳ ದೂರವೇ ಉಳಿದಿದ್ದ ನಟ ರಾಘವೇಂದ್ರ ರಾಜ್‌ಕುಮಾರ್ ಅವರು, ಆರೋಗ್ಯವಂತರಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅವರ ಅಭಿನಯದ ’ಕರ್ನಾಟಕದ ಅಳಿಯ’ದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪುನೀತ್‌ರನ್ನು ಸ್ಮರಿಸಿಕೊಂಡು ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.
‘ನಿನ್ನಿಂದಲೇ ನಾನು ಹುಷಾರಾಗಿದ್ದು, ನಿನ್ನ ಆರೈಕೆಯಿಂದಲೇ ಹೊಸ ಚೈತನ್ಯ ಸಿಕ್ಕಿದ್ದು. ನಿನ್ನ ಆರೈಕೆಯಿಂದಲೇ ಹೊಸಚೈತನ್ಯ ಸಿಕ್ಕಿದು, ನಿನ್ನ ಸಹಕಾರದಿಂದಲೇ ಮತ್ತೆ ಸಿನಿಮಾ ಮಾಡ್ತಾ ಇರೋದು, ನೀನೇ ಈ ಸಿನಿಮಾ ಕಥೆ- ಟೈಟಲ್ ಬಹಳ ಮೆಚ್ಚಿದ್ದು, ಈಗ ನೀನೇ ಹೇಳದೇ ಕೇಳದೇ ನಮ್ಮನ್ನ ಬಿಟ್ಟುಹೋಗಿರೋದು... ಎಂದು ಪೋಸ್ಟ್ ಮಾಡಿದ್ದಾರೆ. ಕರ್ನಾಟಕ ಅಳಿಯ ಚಿತ್ರದ ಕುರಿತು ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ರಾಘವೇಂದ್ರ ರಾಜ್‌ಕುಮಾರ್, ಅದರ ಜತೆ ಪುನೀತ್ ಅವರ ಫೋಟೋ ಹಾಕಿಕೊಂಡು ಈ ಬರಹ ಬರೆದಿದ್ದಾರೆ.
ಪ್ರಥಮ್ ಆವರ ನಿರ್ದೇಶಕರಾಗಿರುವ ಈ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ನಾಯಕರಾಗಿ ನಟಿಸುತ್ತಿದ್ದಾರೆ. ಅಣಜಿ ನಾಗರಾಜ್ ಛಾಯಾಗ್ರಹಣವಿದ್ದು, ಪ್ರದ್ಯೋತನ್ ಸಂಗೀತ ಸಂಯೋಜಕರಾಗಿದ್ದಾರೆ. ‘ಜನವರಿ ಮೊದಲ ವಾರ ಟೀಸರ್ ರಿಲೀಸ್ ಮಾಡಲಿದ್ದೇವೆ. ಬ್ಲ್ಯಾಕ್ ಮ್ಯಾಜಿಕ್ ಇರುವ ಕಥೆ. ಶ್ವೇತಾ ಎಂಬುವವರು ನಿರ್ಮಾಣ ಮಾಡುತ್ತಿದ್ದಾರೆ. ಐಶ್ವರ್ಯಾ ಎಂಬ ಹೊಸ ಪ್ರತಿಭೆ ಇದರ ನಾಯಕಿ' ಎಂದು ಈ ಹಿಂದೆ ಪ್ರಥಮ್ ಮಾಹಿತಿ ನೀಡಿದ್ದರು.