VIDEO: ಅಪ್ಪು ಎಲ್ಲಿದ್ದಾರೆ? ಆಸೆ ಏನಿತ್ತು? ಮತ್ತೆ ಹುಟ್ತಾರಾ...? ಜೀವಂತ ವ್ಯಕ್ತಿಯ ದೇಹದಲ್ಲಿ ಆತ್ಮ ಕರೆಸಿ ಮಾತನಾಡುವೆ ಎಂದ ಗುರೂಜಿ

Puneeth1
Published on

ಬೆಂಗಳೂರು: ಈ ಹಿಂದೆ ಸಾಯಿಬಾಬಾ ಅವರ ಆತ್ಮವನ್ನು ಜೀವಂತ ವ್ಯಕ್ತಿಯ ಒಳಗೆ ಕರೆಯಿಸಿ ಮಾತನಾಡಿದ್ದೇನೆ ಎಂದಿದ್ದ ಸಮ್ಮೋಹನ ತಜ್ಞ ಡಾ. ರಾಮಚಂದ್ರ ಗುರೂಜಿ, ಇದೀಗ ನಟ ಪುನೀತ್‌ ರಾಜ್‌ಕುಮಾರ್‌ ಅವರ ಆತ್ಮವನ್ನೂ ಕರೆಯಿಸಿ ಮಾತನಾಡಲಿದ್ದಾರಂತೆ.

ಹೀಗೆ ತಾವು ಮಾತನಾಡಿದರೆ, ಕೊನೆ ಕ್ಷಣದಲ್ಲಿ ಅಪ್ಪು ಅವರ ಆಸೆ ಏನಾಗಿತ್ತು? ಕೊನೆಗಳಿಗೆಯಲ್ಲಿ ಆಸ್ಪತ್ರೆಯಲ್ಲಿ ಏನಾಯಿತು? ಈಗ ಎಲ್ಲಿದ್ದಾರೆ? ಮತ್ತೆ ಅದೇ ಕುಟುಂಬದಲ್ಲಿ ಹುಟ್ಟಿಬರಲು ಇಷ್ಟಪಡುತ್ತಾರಾ ಈ ಎಲ್ಲ ವಿಚಾರಗಳಿಗೂ ಸ್ಪಷ್ಟತೆ ಸಿಗುತ್ತದೆ ಎಂದಿದ್ದಾರೆ.

ಕಳೆದ ತಿಂಗಳು ಅಮೆರಿಕದ ಚಾರ್ಲಿ ಚಿಟ್ವೆಂಡೆನ್​ ಪ್ಯಾರಾನಾರ್ಮಲ್ ಎಂಬ ತಜ್ಞ ಅಪ್ಪು ಆತ್ಮದ ಜತೆ ಮಾತನಾಡಿದ್ದಾರೆ ಎನ್ನಲಾಗಿದ್ದ ವಿಡಿಯೋ ಭಾರಿ ವೈರಲ್‌ ಆಗಿತ್ತು. ಯಂತ್ರದ ಸಹಾಯದಿಂದ ತಾವು ಆತ್ಮದ ಜತೆ ಮಾತನಾಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು. ಚಾರ್ಲಿ ಅವರು ಕೇಳಿದ ಪ್ರಶ್ನೆಗಳಿಗೆ ಯಂತ್ರದಿಂದ ಕೆಲವೊಂದು ಧ್ವನಿಗಳು ಕೇಳಿಸುತ್ತಿದ್ದವು. ಇದು ಅಪ್ಪುವಿನ ಆತ್ಮದ ಮಾತು ಎಂದು ಹೇಳಿದ್ದರು. ಈ ವಿಡಿಯೋಗೆ ಕೆಲವರು ಸಮ್ಮತಿ ಸೂಚಿಸಿದ್ದರೆ, ಹಲವರಿಂದ ಟೀಕೆಗಳು ಕೇಳಿಬಂದಿದ್ದವು.

ಅದರ ಬೆನ್ನಲ್ಲೇ ಇದೀಗ ರಾಮಚಂದ್ರ ಗುರೂಜಿ ತಾವು ಮುಂದೆ ಅಪ್ಪುವಿನ ಆತ್ಮದ ಜತೆ ಮಾತನಾಡಿರುವುದಾಗಿ ಹೇಳಿದ್ದಾರೆ. ಈ ಹಿಂದೆ ಸಾಯಿಬಾಬಾ ಅವರ ಆತ್ಮವನ್ನು ಜೀವಂತ ವ್ಯಕ್ತಿಯ ದೇಹದೊಳಕ್ಕೆ ಕರೆಸಿ ಮಾತನಾಡಿಸಿದ್ದ ಗುರೂಜಿಯವರ ವಿಡಿಯೋ ಭಾರಿ ಪರ-ವಿರೋಧ ವ್ಯಕ್ತವಾಗಿದ್ದವು. ಈಗ ಪುನೀತ್‌ ಆತ್ಮವನ್ನು ಕರೆಸುವುದಾಗಿ ಅವರು ಹೇಳಿದ್ದಾರೆ. ಅಮೆರಿಕದ ತಜ್ಞ ಯಂತ್ರದ ಮೂಲಕ ಮಾತನಾಡಿಸಿದ್ದಾರೆ. ಅದರಲ್ಲಿ ಸ್ಪಷ್ಟತೆ ಇಲ್ಲ, ಇದೀಗ ನಾನು ಜೀವಂತ ವ್ಯಕ್ತಿಯ ಮೂಲಕವೇ ಅಪ್ಪುವಿನ ಆತ್ಮ ಕರೆಸಿ ಮಾತನಾಡಿಸುವೆ ಎಂದಿದ್ದಾರೆ.

ಈ ವಿಡಿಯೋಗೆ ಕೂಡ ಇದಾಗಲೇ ಸಾಕಷ್ಟು ಮಂದಿ ಕಮೆಂಟ್‌ ಮಾಡಿದ್ದಾರೆ. ಕೆಲವರು ತಮ್ಮ ಪ್ರೀತಿಯ ಅಪ್ಪು ಏನು ಮಾತನಾಡುತ್ತಾರೆ ಎಂದು ಕೇಳಬೇಕಿದೆ ಎಂದಿದ್ದರೆ, ಹಲವರು ಇವೆಲ್ಲಾ ಮೋಸ, ಮಾತನಾಡುವುದೇ ಆಗಿದ್ದರೆ ಮೊದಲು ಮಾತನಾಡಿ ಆಮೇಲೆ ಅದರ ಬಗ್ಗೆ ಹೇಳಬೇಕಿತ್ತು. ಅದನ್ನು ಬಿಟ್ಟು ಮಾತನಾಡುವೆ ಎಂದು ಮೊದಲೇ ಪ್ರಚಾರ ಮಾಡುವುದು ಏಕೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮಚಂದ್ರ ಗುರೂಜಿ ಏನು ಹೇಳಿದ್ದಾರೆ ಎಂಬ ಬಗ್ಗೆ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಇರುವ ಈ ವಿಡಿಯೋದಲ್ಲಿ ಇದೆ ಕೇಳಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net