ಪ್ರಿಯಾಂಕಾ ಗಾಂಧಿ ಪ್ರಯಾಣದ ವೇಳೆ ವಾಹನಗಳ ಢಿಕ್ಕಿ- ಎಲ್ಲೆಡೆ ಆತಂಕದ ಛಾಯೆ

priyankagandhi
Published on

ಲಖನೌ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಹೆಸರಿನಲ್ಲಿ ದೆಹಲಿಯಲ್ಲಿ ನಡೆಸಿದ್ದ ಹಿಂಸಾಚಾರದಲ್ಲಿ ಟ್ರ್ಯಾಕ್ಟರ್​ ಪಲ್ಪಿ ಹೊಡೆದು ಮೃತಪಟ್ಟ ರೈತನ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಕಾಂಗ್ರೆಸ್​ ಮುಖಂಡೆ ಪ್ರಿಯಾಂಕಾ ಗಾಂಧಿ ತೆರಳಿದ್ದರು.

ಈ ಸಂದರ್ಭದಲ್ಲಿ ಅವರು ಪ್ರಯಾಣಿಸುತ್ತಿದ್ದ ವೇಳೆ ಭದ್ರತಾ ವಾಹನಗಳ ಮಧ್ಯೆ ಢಿಕ್ಕಿಯಾಗಿ ಕೆಲಕಾಲ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಹಾಪುರ್​ದಲ್ಲಿ ಈ ಘಟನೆ ಸಂಭವಿಸಿದೆ.

ಭದ್ರತಾ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಕೆನಡಾದಿಂದ ದೆಹಲಿಗೆ ಬಂದಿದ್ದ ನವನೀತ್​ ಎಂಬ ರೈತ ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಮೃತಪಟ್ಟಿದ್ದರು.ಟ್ರ್ಯಾಕ್ಟರ್​ನಿಂದ ಬ್ಯಾರಿಕೇಡ್​ ಒಳಗೆ ನುಗ್ಗಿಸುವ ಸಂದರ್ಭದಲ್ಲಿ ಟ್ರ್ಯಾಕ್ಟರ್​ ಪಲ್ಟಿಯಾಗಿ ಅವರು ಮೃತಪಟ್ಟಿದ್ದು, ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಪ್ರಿಯಾಂಕಾ ಗಾಂಧಿ ತೆರಳಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರಿನ ಹಿಂದೆ ಮತ್ತು ಮುಂದೆ ಭದ್ರತಾ ಸಿಬ್ಬಂದಿ ವಾಹನವಿತ್ತು. ಅವು ಪರಸ್ಪರ ಢಿಕ್ಕಿಯಾಗಿ ಘಟನೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net