ಪತ್ನಿ, ಪ್ರೇಮಿ ಹಾಗೂ ಶವ...! ಪತಿಯ ಮೃತದೇಹದೊಂದಿಗೆ ಆ ಹತ್ತು ದಿನಗಳು...

murder1
Published on

ಹರಿಯಾಣ: ಪ್ರೀತಿ ಏನೆಲ್ಲಾ ಎಡವಟ್ಟು ಹಾಗೂ ಕ್ರೌರ್ಯವನ್ನು ಮಾಡಿಸಿಬಿಡುತ್ತದೆ ಎನ್ನುವುದಕ್ಕೆ ಇಲ್ಲೊಂದು ಘಟನೆಯೇ ಸಾಕ್ಷಿಯಾಗಿದೆ. ಅಕ್ರಮ ಸಂಬಂಧಕ್ಕೆ ಬಿದ್ದ ಮಹಿಳೆಯೊಬ್ಬಳು ತನ್ನ ಪತಿಯನ್ನೇ ಕೊಲೆ ಮಾಡಿ ಆತನ ಮೃತದೇಹದೊಂದಿಗೆ 10 ದಿನಗಳನ್ನು ಕಳೆದ ಭಯಾನಕ ಘಟನೆ ಇದಾಗಿದೆ.

ಈ ಘಟನೆ ನಡೆದಿರುವುದು ಹರಿಯಾಣದಲ್ಲಿ. ಪ್ರಾಪರ್ಟಿ ಡೀಲರ್ ಆಗಿದ್ದ ದಿನೇಶ್‌ ಎನ್ನುವವರು ಕೊಲೆಗೀಡಾದವರು. ದಿನೇಶ್ ಪತ್ನಿ ನಿತಿನ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಇದಕ್ಕೆ ಮುಳ್ಳಾಗಿದ್ದ ಪತಿಯನ್ನು ನಿತಿನ್‌ ಹಾಗೂ ಆತನ ಸ್ನೇಹಿತರ ಜತೆಗೂಡಿ ಕೊಲೆ ಮಾಡಿರುವ ಆರೋಪವಿದೆ.

ಈ ಘಟನೆ ಬೆಳಕಿಗೆ ಬಂದದ್ದು, ಕಳೆದ ಜನವರಿ 28ರಂದು ಚರಂಡಿಯೊಂದರಲ್ಲಿ ಪೊಲೀಸರಿಗೆ ಕೊಳೆತ ಶವ ಸಿಕ್ಕಾಗ. ಅಪರಿಚಿತ ಶವದ ತನಿಖೆ ಶುರು ಮಾಡಿದಾಗ ಅದು ದಿನೇಶ್‌ ಅವರ ಶವ ಎನ್ನುವುದು ತಿಳಿದುಬಂತು. ಈ ಬಗ್ಗೆ ಪೊಲೀಸರು ಇನ್ನಷ್ಟು ತನಿಖೆ ಕೈಗೊಂಡರು.

ಆಗಲೇ ಅವರಿಗೆ ದಿನೇಶ್ ಪತ್ನಿ ನಿತಿನ್ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿರುವ ವಿಷಯ ತಿಳಿದುಬಂತು. ಇದೇ ಕಾರಣಕ್ಕೆ ನಿತಿನ್‌ ಮಾತ್ರವಲ್ಲದೇ ಆತನ ಸ್ನೇಹಿತರ ಜತೆಗೂಡಿ ಕೊಲೆ ಮಾಡುವ ಪ್ಲ್ಯಾನ್‌ ಮಾಡಿದಳು. ಇದಕ್ಕೆ ಆಕೆಯ ಚಿಕ್ಕಪ್ಪ ಹರ್ಜೀತ್ ಸಿಂಗ್ ಕೂಡ ಸಾಥ್‌ ನೀಡಿದ್ದ.

ಜನವರಿ 11ರ ರಾತ್ರಿ ಎಲ್ಲರೂ ಸೇರಿ ಕೋಲಿನಿಂದ ಹೊಡೆದು ದಿನೇಶ್ ಅವರನ್ನು ಕೊಲೆ ಮಾಡಲಾಗಿದೆ. ಶವವನ್ನು ಗೋಣಿ ಚೀಲದಲ್ಲಿ ತುಂಬಿ ಬಾತ್‌ರೂಮಿನಲ್ಲಿ ಇಡಲಾಗಿದೆ. ಕೂಡಲೇ ಶವವನ್ನು ಎಲ್ಲಿ ಹಾಕುವುದು ಎಂದು ತಿಳಿಯದ ಕಾರಣ ಹಾಗೂ ಪೊಲೀಸರ ಕೈಯಲ್ಲಿ ಸುಲಭದಲ್ಲಿ ಸಿಕ್ಕಿಬೀಳಬಹುದು ಎನ್ನುವ ಭಯದಿಂದ ಮನೆಯಲ್ಲಿಯೇ ಶವವನ್ನು ಇಟ್ಟುಕೊಂಡಿದ್ದಾಳೆ ಮಹಿಳೆ. ಸುಮಾರು 10 ದಿನ ಅಲ್ಲಿಯೇ ಶವವಿದ್ದು, ಅದರ ಜತೆಗೇ ಮಹಿಳೆ ಮನೆಯಲ್ಲಿ ಇದ್ದಾಳೆ!

ಜನವರಿ 18ಕ್ಕೆ ದುರ್ವಾಸನೆ ಬರಲು ಆರಂಭವಾಗಿದೆ. ನಂತರ ನೆರೆಹೊರೆಯವರಿಗೆ ಸಂದೇಹ ಬರಬಹುದು ಎನ್ನುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಅದನ್ನು ಚರಂಡಿಯಲ್ಲಿ ಎಸೆದು ಬಂದಿದ್ದಾರೆ. ಇದಕ್ಕಾಗಿ 41 ಸಾವಿರ ರೂಪಾಯಿಗಳನ್ನೂ ಪತ್ನಿ ನೀಡಿರುವ ವಿಷಯ ಪೊಲೀಸರಿಗೆ ತಿಳಿದಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ತನಿಖೆ ನಡೆಸುತ್ತಿದ್ದಾರೆ ಪೊಲೀಸರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net