

ನಾಗ್ಪುರ: ಸರ್ಕಾರಿ ಆಸ್ಪತ್ರೆ ಎಂದರೆ ಮೂಗುಮುರಿಯುವವರೇ ಹೆಚ್ಚು. ಅಲ್ಲಿ ಸೌಲಭ್ಯಗಳು ಸರಿ ಇರುವುದಿಲ್ಲ ಎಂದುಕೊಂಡು ದುಡ್ಡು ಖರ್ಚಾದರೂ ಪರವಾಗಿಲ್ಲ, ಖಾಸಗಿ ಆಸ್ಪತ್ರೆಗೆ ಹೋಗುತ್ತೇವೆ ಎನ್ನುವವರೆಲ್ಲಾ ಬಹುತೇಕ ಮಂದಿ. ಅವುಗಳ ನಡುವೆ ಎಷ್ಟೋ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆದು ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿವೆ, ಈ ನಿಟ್ಟಿನಲ್ಲಿ ಪ್ರಯತ್ನಗಳೂ ಸಾಗಿವೆ.
ಆದರೆ ಬೀದಿನಾಯಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರುಬಾರು ನಡೆಸುವ ದೃಶ್ಯ ಇತ್ತೀಚಿನ ದಿನಗಳಲ್ಲಿ ಕೆಲವು ಕಡೆಗಳಿಂದ ವರದಿಯಾಗುತ್ತಿವೆ.
ಈಗ ಮಹಾರಾಷ್ಟ್ರದ ನಾಗ್ಪುರ ಸರ್ಕಾರ ಆಸ್ಪತ್ರೆಯ ಸರದಿ. ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಜಿಎಂಸಿ) ರೋಗಿಗಳ ವಾರ್ಡ್ ಒಳಗೆ ಬೀದಿನಾಯಿಯೊಂದು ಅಡ್ಡಾದಿಡ್ಡಿಯಾಗಿ ಓಡಾಟ ನಡೆಸಿದೆ. ರೋಗಿಗಳು ಹಾಗೂ ಅವರ ಸಂಬಂಧಿಕರು ಮಲಗಿಕೊಂಡಿರುವ ಜಾಗದಲ್ಲಿಯೇ ನಿರಾತಂಕವಾಗಿ ಓಡಾಡಿಕೊಂಡಿರುವ ನಾಯಿ, ಅಲ್ಲಿ ಇಟ್ಟಿರುವ ವಸ್ತುಗಳನ್ನು ಮೂಸಿ ನೋಡುತ್ತಿವೆ.
ಸ್ಥಳದಲ್ಲಿಯೇ ಇರುವವರು ಅದರ ವಿಡಿಯೋ ಮಾಡಿಕೊಂಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮಹಾರಾಷ್ಟ್ರ ಸರ್ಕಾರವನ್ನು ಕಮೆಂಟಿಗರು ಛೀಮಾರಿ ಹಾಕಲು ಶುರು ಮಾಡಿದ್ದಾರೆ ಇವುಗಳ ಸಾಕಷ್ಟು ಫೋಟೋಗಳೂ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಲೇ ಮಹಾರಾಷ್ಟ್ರ ಸರ್ಕಾರ ಎಚ್ಚೆತ್ತುಕೊಂಡಿದೆ.
ಈ ಫೋಟೋ ಹಾಗೂ ವಿಡಿಯೋದಲ್ಲಿ ಇರುವ ಸಂಗತಿಗಳನ್ನು ಆಧರಿಸಿ ಕೂಡಲೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜಿಎಂಸಿ ನಾಗ್ಪುರದ ಅಧೀಕ್ಷಕರು ಹೇಳಿದ್ದಾರೆ.