

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು ಸರಿಯಲ್ಲ ಎಂದು ವಾದಿಸುತ್ತಾ ಬಂದಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಕೊನೆಗೂ ಕೋರ್ಟ್ ತೀರ್ಪಿನಂತೆ ಒಂದು ರೂಪಾಯಿ ದಂಡವನ್ನು ಪಾವತಿ ಮಾಡಿದ್ದಾರೆ.
ಆದರೆ ತಮ್ಮನ್ನು ತಪ್ಪಿತಸ್ಥರು ಎಂದು ತೀರ್ಪಿತ್ತ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ವಿಸ್ಕೃತ ಪೀಠಕ್ಕೆ ಮನವಿ ಸಲ್ಲಿಸಲು ಬಯಸಿರುವ ಭೂಷಣ್ ಅವರು ಕಳೆದ ಶನಿವಾರ, ಇದಕ್ಕೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪ್ರಕರಣ ವಿಚಾರಣೆಯನ್ನು ವಿಸ್ಕೃತ ಪೀಠದಲ್ಲಿನ ಬೇರೆ ನ್ಯಾಯಮೂರ್ತಿಗಳು ನಡೆಸಲು ಅವಕಾಶ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ. ಇವರ ಮನವಿಗೆ ಸಂಬಂಧಿಸಿದ ಅರ್ಜಿ ಇನ್ನೂ ಇತ್ಯರ್ಥಕ್ಕೆ ಬಾಕಿ ಇದೆ.
ತಾವು ದಂಡದ ಹಣ ನೀಡಿರುವ ಹಾಗೂ ಸುಪ್ರೀಂಕೋರ್ಟ್ಗೆ ಪುನಃ ಅರ್ಜಿ ಸಲ್ಲಿಸಿರುವ ಕುರಿತಂತೆ ಸ್ಪಷ್ಟನೆ ನೀಡಿರುವ ಪ್ರಶಾಂತ್ ಭೂಷಣ್ ಅವರು, ನಾನು ದಂಡದ ಹಣವನ್ನು ಪಾವತಿ ಮಾಡಿದ್ದೇನೆ ಎಂದರೆ ಇದರರ್ಥ ನಾನು ನ್ಯಾಯಾಲಯದ ತೀರ್ಪನ್ನು ಸ್ವೀಕರಿಸಿದ್ದೇನೆ ಎಂದಲ್ಲ. ಸುಪ್ರೀಂಕೋರ್ಟ್‌ನ ತೀರ್ಪಿನಂತೆ ಈ ಹಣವನ್ನು ಜಮಾ ಮಾಡಿದ್ದೇನಷ್ಟೇ. ಆದರೆ ತಮ್ಮ ಕೇಸನ್ನು ಬೇರೆ ಪೀಠಕ್ಕೆ ವರ್ಗಾಯಿಸಲು ಅನುಮತಿ ಕೋರಿ ಇದಾಗಲೇ ಶನಿವಾರ ಅರ್ಜಿ ಸಲ್ಲಿಸಿದ್ದೇನೆ. ಇದರ ಜತೆಗೆ ಈ ತೀರ್ಪಿನ ವಿರುದ್ಧ ಪುನರ್ಪರಿಶೀಲನಾ ಅರ್ಜಿಯನ್ನೂ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.
ಏನಿದು ಪ್ರಕರಣ? ನ್ಯಾಯಾಲಯ ಹಾಗೂ ನ್ಯಾಯಮೂರ್ತಿಗಳ ವಿರುದ್ಧ ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಎರಡು ಟ್ವೀಟ್ಗಳ ಹಿನ್ನೆಲೆಯಲ್ಲಿ ಇವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಾಗಿತ್ತು.
ಜೂನ್ 27ರಂದು ಮಾಡಿದ್ದ ನ್ಯಾಯಾಂಗ ನಿಂದನೆಯಾಗುವಂಥ ಟ್ವೀಟ್‌ನಲ್ಲಿ ಪ್ರಶಾಂತ್ ಭೂಷಣ್ ಅವರು, ತುರ್ತು ಪರಿಸ್ಥಿತಿ ಹೇರದೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ನಾಶ ಮಾಡಲಾಗಿದೆ. ಕಳೆದ ಆರು ವರ್ಷಗಳ ಇತಿಹಾಸ ನೋಡಿದರೆ ಇದು ತಿಳಿಯುತ್ತದೆ. ಈ ರೀತಿ ಪ್ರಜಾಪ್ರಭುತ್ವ ನಾಶ ಮಾಡುವಲ್ಲಿ ಸುಪ್ರೀಂಕೋರ್ಟ್‌ನ ಪಾತ್ರವನ್ನು ಸ್ಪಷ್ಟವಾಗಿ ನೋಡಬಹುದು. ಅದರಲ್ಲೂ ಕಳೆದ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಪಾತ್ರ ಇದರಲ್ಲಿ ಅತ್ಯಂತ ದೊಡ್ಡದಾಗಿದೆ ಎಂದಿದ್ದರು.
ಜೂನ್ 29ರ ಟ್ವೀಟ್‌ನಲ್ಲಿ ನಾಗ್ಪುರದಲ್ಲಿ ರಾಜಭವನದಲ್ಲಿ ಬಿಜೆಪಿ ನಾಯಕನಿಗೆ ಸೇರಿದ 50 ಲಕ್ಷ ರೂಪಾಯಿ ಬೈಕ್‌ನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ್ದಾರೆ ಎಂದು ಆರೋಪಿಸಿದ್ದ ಅವರು, ದೇಶದ ನಾಗರಿಕರ ಮೂಲ ಹಕ್ಕಾದ ನ್ಯಾಯ ಸಿಗುವುದಕ್ಕೆ ಕರೊನಾ ಲಾಕ್‌ಡೌನ್ ಎಂದು ಹೇಳಿಕೊಂಡು ಕೋರ್ಟ್ ಕಾರ್ಯಕಲಾಪಕ್ಕೆ ರಜೆ ಹಾಕಿ ನ್ಯಾಯಮೂರ್ತಿಗಳು ಬೈಕ್‌ನಲ್ಲಿ ಜಾಲಿ ರೈಡ್ ಮಾಡುತ್ತಿದ್ದಾರೆ ಎಂದು ಟೀಕಿಸಿ ಇನ್ನೊಂದು ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದರು.