ಭಾರತದ ಗರ್ಭಿಣಿ ಸಾವು: ಪೋರ್ಚುಗಲ್​ ಆರೋಗ್ಯ ಸಚಿವೆ ರಾಜೀನಾಮೆ! ಏನಿದು ಘಟನೆ?

pregnant
Published on

ಸಾವೊಫ್ರಾನ್ಸಿಸ್ಕೊ (ಪೋರ್ಚುಗಲ್​) : ಭಾರತ ಮೂಲದ ಗರ್ಭಿಣಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಪೋರ್ಚುಗಲ್​ನ ಆರೋಗ್ಯ ಸಚಿವೆ ರಾಜೀನಾಮೆ ನೀಡಿರುವ ಘಟನೆ ನಡೆದಿದೆ. ಇದಕ್ಕೆ ಕಾರಣ, ಆಸ್ಪತ್ರೆಯಲ್ಲಿ ಸರಿಯಾದ ಹಾಸಿಗೆ ಲಭ್ಯತೆ ಇಲ್ಲದೇ ಗರ್ಭಿಣಿ ಮೃತಪಟ್ಟಿದ್ದಾರೆ ಎನ್ನುವ ಕಾರಣಕ್ಕೆ!

ಇದರ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವೆ ಮಾರ್ತಾ ಟೆಮಿಡೊ ರಾಜೀನಾಮೆ ನೀಡಿದ್ದಾರೆ.

ಆಗಿದ್ದೇನು? ಪೋರ್ಚುಗಲ್​ಗೆ ಪ್ರವಾಸಕ್ಕೆಂದು ಹೋಗಿದ್ದ 31 ವಾರಗಳ ಭಾರತದ ಗರ್ಭಿಣಿಗೆ ಇದ್ದಕ್ಕಿದ್ದಂತೆಯೇ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಅತಿದೊಡ್ಡ ಆಸ್ಪತ್ರೆ ಎಂದು ಎನಿಸಿಕೊಂಡಿರುವ ಸಾಂಟಾ ಮಾರಿಯಾಗೆ ಕರೆದುಕೊಂಡು ಹೋಗಲಾಗಿತ್ತು. ಉಸಿರಾಟದ ಸಮಸ್ಯೆಯನ್ನು ತಕ್ಕಮಟ್ಟಿಗೆ ಅಲ್ಲಿ ಸರಿ ಮಾಡಲಾಯಿತು.

ಆದರೆ ಅಲ್ಲಿಯೇ ಆಕೆಯನ್ನು ಇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ನವಜಾತ ಶಿಶುಗಳ ವಿಭಾಗ ಭರ್ತಿಯಾಗಿತ್ತು. ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದಾಗಿ ಹಾಸಿಗೆಯ ಕೊರತೆ ಉಂಟಾಗಿತ್ತು. ಕೂಡಲೇ ಅವರನ್ನು ಕ್ಸೇವಿಯರ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಮಾರ್ಗಮಧ್ಯೆಯೇ ಹೃದಯ ಸ್ತಂಭನದಿಂದ ಅವರು ಮೃತಪಟ್ಟರು.

ಈ ಘಟನೆ ಭಾರಿ ಸುದ್ದಿಯಾಯಿತು. ಘಟನೆಯ ನಂತರ ಸರ್ಕಾರವು ತೀವ್ರ ಟೀಕೆಗೆ ಒಳಗಾಯಿತು. ಆದ್ದರಿಂದ ಘಟನೆಯ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವೆ ರಾಜೀನಾಮೆ ನೀಡಿದರು. ಇದಕ್ಕೆ ನಾನೇ ಜವಾಬ್ದಾರಿ ಹೊರುತ್ತೇನೆ ಎಂದ ಸಚಿವೆ ಘಟನೆ ಸಂಭಿವಿಸಿದ ಐದು ಗಂಟೆಯ ಒಳಗೇ ರಾಜೀನಾಮೆ ನೀಡಿದರು. ಅದನ್ನು ಪ್ರಧಾನಮಂತ್ರಿ ಅವರು ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net