VIDEO: ಏಷ್ಯಾಕಪ್​ ಮೈದಾನದಲ್ಲಿ ರೊಮಾನ್ಸ್​- ಪಂದ್ಯ ಸೋತರೂ ಗೆಳತಿ ಹೃದಯ ಕದ್ದ ಹಾಂಗ್​ಕಾಂಗ್​ ಆಟಗಾರ

kinchith
Published on

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ (ಆ.31) ನಡೆದ ಏಷ್ಯಾಕಪ್- 2022 ನಲ್ಲಿ ಭಾರತವು ಹಾಂಗ್​ಕಾಂಗ್​ ಎದುರು 40 ರನ್​ಗಳ ಗೆಲುವು ಕಂಡಿದೆ. ಈ ಮೂಲಕ ಟೀಮ್ ಇಂಡಿಯಾ ಏಷ್ಯಾ ಕಪ್‌- 2022 ಟೂರ್ನಿಯ ‘ಎ’ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಸೂಪರ್‌-4 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಹಾಂಗ್​ಕಾಂಗ್​ ಸೋತರೂ ರೊಮಾಂಟಿಕ್​ ಮೂಡ್​ ಒಂದು ಕ್ರೀಡಾಂಗಣದಲ್ಲಿ ಸೃಷ್ಟಿಯಾಯಿತು. ಪಂದ್ಯದ ಬಳಿಕ ಹಾಂಗ್​ಕಾಂಗ್ ತಂಡದ ಬ್ಯಾಟ್ಸ್ ಮನ್ ಕಿಂಚಿತ್ ಷಾ ತಮ್ಮ ಗೆಳತಿಗೆ ರೊಮಾಂಟಿಕ್​ ಆಗಿ ಪ್ರಪೋಸ್ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪಂದ್ಯದಲ್ಲಿ ಸೋತ ಬಳಿಕ ಡ್ರೆಸ್ಸಿಂಗ್ ರೂಮ್​ಗೆ ಕಿಂಚಿತ್​ ತೆರಳುತ್ತಿದ್ದರು. ಅವರು ಸೋತಿದ್ದಕ್ಕೆ ಗೆಳತಿ ಅಲ್ಲಿಯೇ ಬೇಸರದಿಂದ ನಿಂತಿದ್ದರು. ಆದರೂ ಕಿಂಚಿತ್​ ಅವರು ಅಪ್ಪಿಕೊಳ್ಳಲು ಅವರು ಮುಂದಾದಾಗ, ಕಿಂಚಿತ್​ ಮಂಡಿಯೂರಿ ಪ್ರೇಮನಿವೇದನೆ ಮಾಡಿದ್ದಾರೆ. ಆಗ ಗೆಳತಿಯ ಮೊಗದಲ್ಲಿ ನಗು ಅರಳಿದೆ. ಆನಂದಬಾಷ್ಪ ಉಕ್ಕಿ ಹರಿದಿದೆ. ಕೊನೆಗೆ ಕಿಂಚಿತ್​, ಉಂಗುರ ಕೈಯಲ್ಲಿ ಹಿಡಿದು "ನೀನು ನನ್ನನ್ನು ಮದುವೆಯಾಗುವೆಯಾ?" ಎಂದು ಕಿಂಚಿತ್ ಹೇಳಿದ್ದಾರೆ.

ಇದಕ್ಕೆ ನಾಚಿಕೆಯಿಂದ ಅವರ ಸ್ನೇಹಿತೆ ತಲೆ ಅಲ್ಲಾಡಿಸಿದ 'ಖಂಡಿತ! ಎಂದು ಉತ್ತರಿಸಿದ್ದಾರೆ. ಗೆಳತಿಗೆ ಉಂಗುರ ತೊಡಿಸುವ ಮೂಲಕ ಸಾವಿರಾರು ಜನರ ಮಧ್ಯೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ಕುಳಿತಿದ್ದ ಪ್ರೇಕ್ಷಕರು ಈ ಜೋಡಿಯ ಪ್ರೀತಿಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.

ಅಂದಹಾಗೆ ಕಿಂಚಿತ್ ಷಾ ಮುಂಬೈ ಮೂಲದವರು. ಅವರ ತಂದೆ ಕೂಡ ಕ್ರಿಕೆಟ್ ಆಡುತ್ತಿದ್ದರು. ಕಿಂಚಿತ್​ ಮೂರು ತಿಂಗಳ ಮಗುವಾಗಿದ್ದಾಗ, ಅವರ ತಂದೆ ಕುಟುಂಬದೊಂದಿಗೆ ಹಾಂಗ್​​ಕಾಂಗ್​ ಗೆ ಹೋಗಿದ್ದರು. ತಂದೆ ಕ್ರಿಕೆಟ್ ಆಡುವುದನ್ನು ನೋಡಿ 10ನೇ ವಯಸ್ಸಿನಲ್ಲಿ ಶಾ ಲೆದರ್ ಬಾಲ್ ಕ್ರಿಕೆಟ್​ನಲ್ಲಿ ತೊಡಗಿಕೊಂಡರು. ಕಿಂಚಿತ್​ ಅವರ ತಂದೆ ವಜ್ರದ ವ್ಯಾಪಾರಿ. ಕ್ರಿಕೆಟ್ ಜೊತೆಗೆ ಕಿಂಚಿತ್​ ತಮ್ಮ ತಂದೆಗೆ ವ್ಯಾಪಾರದಲ್ಲಿ ಸಹಾಯ ಮಾಡುತ್ತಾರೆ. ಷಾ ಅವರು 4 ವರ್ಷಗಳ ಕಾಲ ಕ್ಲಬ್ ಕ್ರಿಕೆಟ್ ಆಡಿದ ನಂತರ ಹಾಂಗ್ ಕಾಂಗ್ ತಂಡವನ್ನು ಸೇರಿಕೊಂಡಿದ್ದಾರೆ. 2018ರ ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. (ಏಜೆನ್ಸೀಸ್​)

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net