ಮಗನ ಮದುವೆಗೆ ನೆರವಾದದ್ದೇ ತಪ್ಪಾಯ್ತು: ಗಂಡ ಹತ್ತಿರ ಸೇರಿಸುತ್ತಿಲ್ಲ- ಅವರ ಆಸ್ತಿ ಸಿಗುವುದಿಲ್ಲವೆ?

nyayadevate
Published on
ಪ್ರಶ್ನೆ: ನಾನೊಬ್ಬಳು ಗೃಹಿಣಿ. ಗಂಡ ಪ್ರೌಢಶಾಲಾ ಶಿಕ್ಷಕರು. ಅವರು 2016ರಲ್ಲಿ ನಿವೃತ್ತಿ ಆದರು. ನನಗೆ ಮೂರು ಮಕ್ಕಳು. ಮಗನಿಗೆ ಬ್ಯಾಂಕಿನಲ್ಲಿ ಕೆಲಸ. ಮಗಳು ಗುತ್ತಿಗೆ ಆಧಾರದಲ್ಲಿ ಡಾಕ್ಟರ್.

ಮೂರನೇ ಮಗ ನಿರುದ್ಯೋಗಿ. ಮೊದಲ ಮಗ ಬೇರೆ ಜಾತಿಯ ಹುಡುಗಿಯನ್ನು ಮದುವೆ ಆಗಲು ಇಷ್ಟಪಟ್ಟಿದ್ದು ಅವನು ಹಾಗೆ ಮದುವೆ ಆಗಲು ನಾನು ಸಹಾಯ ಮಾಡಿದ್ದರಿಂದ ನನ್ನ ಗಂಡ ನನಗೆ ಮಕ್ಕಳು ಬೇಡ, ಬೇಕಾದರೆ ಹೆಂಡತಿ ಮಾತ್ರ ಬರಲಿ ಎಂದು ಹಠ ಹಿಡಿಯುತ್ತಿದ್ದಾರೆ. ತುಂಬ ಸಲ ಮನೆಗೆ ಹೋದರೂ ನಮ್ಮನ್ನು ಮನೆಗೆ ಸೇರಿಸುತ್ತಿಲ್ಲ. ನಮ್ಮ ಯಜಮಾನರ ಹೆಸರಿನಲ್ಲಿ ಎರಡು ಸೈಟು ಇದೆ. ಬ್ಯಾಂಕಿನಲ್ಲಿ ತುಂಬ ಹಣವಿದೆ. ನಿವೃತ್ತಿ ಆದಾಗ ತುಂಬ ಹಣ ಬಂದಿದೆ.

10 ಲಕ್ಷ ಹಣಕ್ಕೆ ನಾಮಿನಿಯಾಗಿ ನನ್ನನ್ನು ಮಾಡಿದ್ದರು. ಈಗ ಅದನ್ನು ರದ್ದು ಮಾಡಿ ಅವರ ತಮ್ಮನ ಹೆಸರನ್ನು ಮಾಡಿದ್ದಾರೆ. ನನ್ನ ಸ್ವಯಾರ್ಜಿತ, ನಾನು ಯಾರಿಗಾದರೂ ಕೊಡುತ್ತೇನೆ. ನಿಮಗೆ ಯಾರಿಗೂ ನಯಾ ಪೈಸೆಯೂ ಕೊಡುವುದಿಲ್ಲ ಎನ್ನುತ್ತಿದ್ದಾರೆ. ನನಗೆ ಹೆದರಿಕೆ ಆಗುತ್ತಿದೆ. ನನ್ನ ಪ್ರಶ್ನೆ ಏನೆಂದರೆ ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಹಕ್ಕು ಇಲ್ಲವೇ? ನಾನು ನನ್ನ ಜೀವನೋಪಾಯಕ್ಕೆ ಏನು ಮಾಡಬೇಕು?

ಉತ್ತರ: ನಮ್ಮ ದೇಶದಲ್ಲಿ ವಿವಾಹಿತ ಮಹಿಳೆಗೆ ತನ್ನ ಗಂಡನ ಆಸ್ತಿಯಲ್ಲಿ ಆತ ಬದುಕಿರುವವರೆಗೆ ಭಾಗ ಕೇಳುವ ಹಕ್ಕು ಇರುವುದಿಲ್ಲ. ನಿಮ್ಮ ಯಜಮಾನರ ಸ್ವಯಾರ್ಜಿತ ಆಸ್ತಿಯನ್ನು ಅವರು ತಮ್ಮ ಜೀವಿತ ಕಾಲದಲ್ಲಿ ಯಾರಿಗೆ ಬೇಕಾದರೂ ಕ್ರಯ/ದಾನ ಇತ್ಯಾದಿ ಮಾಡಬಹುದು. ನಿಮಗೆ ಅದನ್ನು ಪ್ರಶ್ನಿಸುವ ಹಕ್ಕು ಇರುವುದಿಲ್ಲ.

ಆದರೆ, ನಿಮಗೆ ನಿಮ್ಮ ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಇರುತ್ತದೆ. ನೀವು ಯಾವುದಾದರೂ ವಕೀಲರನ್ನು ಸಂಪರ್ಕಿಸಿ ಜೀವನಾಂಶಕ್ಕಾಗಿ ದಾವೆಯನ್ನು ಹಾಕಿ. ನೀವು ಈ ದಾವೆಯಲ್ಲಿ ನಿಮ್ಮ ಯಜಮಾನರ ಹೆಸರಿನಲ್ಲಿರುವ ಠೇವಣಿ ಹಣದ ಮೇಲೆ ಚಾರ್ಜ್ ಪಡೆಯಬಹುದು. ಇದರಿಂದ ನಿಮ್ಮ ಯಜಮಾನರು ನಿಮಗೆ ಜೀವನಾಂಶ ಕೊಡುವುದನ್ನು ನಿಲ್ಲಿಸಿದರೆ ಅವರ ಠೆವಣಿ ಹಣದಿಂದ ನಿಮಗೆ ಜೀವನಾಂಶ ಕೊಡುವಂತೆ ನ್ಯಾಯಾಲಯ ಆದೇಶ ಮಾಡುತ್ತದೆ.

ಆದರೆ, ಯಾವುದಕ್ಕೂ ನೀವು ದಾವೆ ಹಾಕುವ ಮುಂಚೆ ಹಿರಿಯರನ್ನು ಹಿತೈಷಿಗಳನ್ನು ಕರೆಯಿಸಿ ಮಾತನಾಡಿ ನೋಡಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಅವರು ನಿಮಗೆ ಜಿವನಾಂಶ ಮಾತ್ರ ನ್ಯಾಯಾಲಯದಲ್ಲಿ ಕೊಡಲು ಒಪ್ಪಿ ತಮ್ಮ ಆಸ್ತಿಗಳನ್ನೆಲ್ಲ ಬೇರೆಯವರ ಪಾಲು ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯ ಆಗುವುದಿಲ್ಲ. ಆಸ್ತಿ ಬೇಕಾದರೆ ಬಾಂಧವ್ಯವನ್ನೂ ಉಳಿಸಿಕೊಳ್ಳಬೇಕಾಗುತ್ತದೆ. ಯೋಚಿಸಿ ನೋಡಿ.

ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು https://www.vijayavani.net/ ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net