More

    ಮನೆ ಕಟ್ಟಿದ ಮಾತ್ರಕ್ಕೆ ಆಸ್ತಿ ನಿಮ್ಮದಾಗುವುದಿಲ್ಲ: ಕಾನೂನು ಏನು ಹೇಳುತ್ತದೆ ನೋಡಿ…

    ಮನೆ ಕಟ್ಟಿದ ಮಾತ್ರಕ್ಕೆ ಆಸ್ತಿ ನಿಮ್ಮದಾಗುವುದಿಲ್ಲ: ಕಾನೂನು ಏನು ಹೇಳುತ್ತದೆ ನೋಡಿ...ಪ್ರಶ್ನೆ: ನಮ್ಮ ತಂದೆ ಅವರಿಗೆ ಮೊದಲೇ ಇನ್ನೊಂದು ಮದುವೆ ಆಗಿದ್ದರೂ , ಅವರ ಮೊದಲನೆ ಹೆಂಡತಿ ಬದುಕಿದ್ದರೂ ಅವರು ಸತ್ತು ಹೋಗಿದ್ದಾರೆ ಎಂದು ಸುಳ್ಳು ಹೇಳಿ ನಮ್ಮ ತಾಯಿಯನ್ನು ಮದುವೆ ಆದರು. ನಮ್ಮ ತಾಯಿಗೆ ನಾವು ಇಬ್ಬರು ಮಕ್ಕಳು. ಮೊದಲ ಹೆಂಡತಿಗೂ ಐದು ಮಕ್ಕಳಿದ್ದಾರೆ.

    ನಮ್ಮ ತಂದೆ ಮಾಡಿದ ಮೋಸ ತಿಳಿದು ನಮ್ಮ ತಾಯಿ ಪ್ರಶ್ನೆ ಮಾಡಿದಾಗ, ಅವರು ನಮ್ಮ ತಾಯಿಗೆ ” ವಿಲ್‌ ಯಾ ಮರಣ ಶಾಸನ” ಎಂದು ಸ್ವಲ್ಪ ಜಮೀನು ಬರೆಸಿಕೊಟ್ಟಿದ್ದಾರೆ. ಅದರಲ್ಲಿ ನಮ್ಮ ತಾಯಿ ಮನೆ ಕಟ್ಟಿದ್ದಾರೆ. ಆದರೆ ನಮ್ಮ ತಂದೆ ತಮ್ಮ ಹೆಸರಿನಲ್ಲೇ ಕಂದಾಯ ಕಟ್ಟುತ್ತಿದ್ದಾರೆ. ಖಾತೆ ಅವರ ಹೆಸರಿನಲ್ಲೇ ಇದೆ. ಮೊದಲ ಹೆಂಡತಿಯ ಜೊತೆ ಸೇರಿ ನಮ್ಮನ್ನು ಮನೆಯಿಂದ ಆಚೆ ಹಾಕಿದ್ದಾರೆ.

    ನಮ್ಮ ತಾಯಿಗೆ ಆಗಿರುವ ಅನ್ಯಾಯಕ್ಕೆ ಏನು ಪರಿಹಾರವಿದೆ? ನಮ್ಮ ತಾಯಿಯ ಹತ್ತಿರ ಗೃಹ ಪ್ರವೇಶ ಮಾಡಿದ ಪತ್ರಿಕೆ ಮಾತ್ರ ಸಾಕ್ಷಿ ಇದೆ. ನಮ್ಮ ತಾಯಿ ಕಷ್ಟ ಪಟ್ಟು ಕಟ್ಟಿದ ಮನೆ ಅವರಿಗೆ ದಕ್ಕುತ್ತದೆಯೇ? ನಮ್ಮ ತಂದೆ ಬರೆಸಿಕೊಟ್ಟಿರುವ ವಿಲ್‌ಗೆ ಮಾನ್ಯತೆ ಇದೆಯೇ?

    ಉತ್ತರ: ನಿಮ್ಮ ತಂದೆ ಮಾಡಿರುವ ವಿಲ್‌ ಅವರ ಮರಣಾ ನಂತರ ಮಾತ್ರ ಬೆಲೆ ಪಡೆಯುತ್ತದೆ. ನಿಮ್ಮ ತಂದೆ ತಾವು ಬದುಕಿರುವಾಗಲೇ ಆ ಮರಣಶಾನವನ್ನು ಬದಲಾಯಿಸಿ ಬೇರೆಯವರಿಗೆ ಆ ಆಸ್ತಿಯನ್ನು ವಿಲ್/ದಾನ /ಕ್ರಯ ಮಾಡಬಹುದು. ನಿಮ್ಮ ತಾಯಿ ನೋಂದಾಯಿತ ದಾನ ಪತ್ರ ಮಾಡಿಸಿಕೊಂಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.

    ಮನೆ ಕಟ್ಟಿದ ಮಾತ್ರಕ್ಕೆ, ಗೃಹ ಪ್ರವೇಶದ ಪತ್ರಿಕೆ ಇದ್ದ ಮಾತ್ರಕ್ಕೆ ಆಸ್ತಿ ನಿಮ್ಮದಾಗುವುದಿಲ್ಲ. ಈ ದಿನಕ್ಕೆ ಆ ಮನೆಯ ಆಸ್ತಿ ನಿಮ್ಮ ತಾಯಿಯದು ಎಂದು ಕಾನೂನಿನ ದೃಷ್ಟಿಯಲ್ಲಿ ಹೇಳಲಾಗುವುದಿಲ್ಲ. ಇನ್ನು ನಿಮ್ಮ ತಾಯಿಯನ್ನು ಮತ್ತು ನಿಮ್ಮನ್ನು ನಿಮ್ಮ ತಂದೆ ಹೊರಹಾಕಿರುವ ಬಗ್ಗೆ , ನಿಮ್ಮ ತಾಯಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡಲು ಇರುವ ಕಾನೂನಿನ ಕೆಳಗೆ ಪ್ರಕರಣ ದಾಖಲಿಸಿ ನಿಮ್ಮ ತಾಯಿಗೆ ಜೀವನಾಂಶ ಕೊಡುವಂತೆ, ಇರಲು ಮನೆಯ ವ್ಯವಸ್ಥೆ ಮಾಡುವಂತೆ ಪ್ರಕರಣ ದಾಖಲಿಸ ಬಹುದು.

    ಈ ರೀತಿ ಪ್ರಕರಣ ದಾಖಲಿಸಿ, ನಿಮ್ಮ ತಂದೆಗೆ ನೋಟೀಸು ಜಾರಿ ಆದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ನ್ಯಾಯಾಲಯವನ್ನು ಕೇಳಿಕೊಳ್ಳಿ. ಅಲ್ಲಿ ನಿಮ್ಮ ತಂದೆ ತಾಯಿ ಕೂತು ಮಧ್ಯಸ್ಥಿಕೆಗಾರರ ಮೂಲಕ ಮಾತಾಡಿದಾಗ ಯಾವುದಾದರೂ ರಾಜಿ ಒಪ್ಪಂದ ಆಗಬಹುದು. ಯಾವುದಕ್ಕೂ ನಿಮ್ಮ ತಂದೆ ಒಪ್ಪದಿದ್ದರೆ ಪ್ರಕರಣ ಮುಂದುವರೆಸಿ. ನಿಮ್ಮ ತಾಯಿಗೆ ಹಣ ಕಾಸಿನ ತೊಂದರೆ ಇದ್ದರೆ, ನಿಮ್ಮ ತಾಲ್ಲೂಕಿನ ಕಾನೂನು ಸೇವಾ ಕೇಂದ್ರದಲ್ಲಿ ಅರ್ಜಿಕೊಡಿ. ಒಂದು ರೂಪಾಯಿಯ ಖರ್ಚೂ ಇಲ್ಲದೆ ಅವರು ಕೇಸು ಹಾಕಲು ಮತ್ತು ನಡೆಸಲು ಸಹಾಯ ಮಾಡುತ್ತಾರೆ.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

    ಮೊದಲ ಮದುವೆ ಮುಚ್ಚಿಟ್ಟು ವಿವಾಹವಾಗಿದ್ದರೂ, ಗಂಡನ ಕೊಲೆ ಮಾಡಿರುವ ಶಂಕೆಯಿದ್ದರೂ ಈ ಕೇಸ್​ನಲ್ಲಿ ಆಸ್ತಿ ಸಿಗುತ್ತೆ…

    ಅಪ್ಪನ ಅಣ್ಣನಿಗೆ ಮಕ್ಕಳಿಲ್ಲದಿದ್ದರೆ ಅವರ ಆಸ್ತಿಗೆ ನಾವೇ ಹಕ್ಕುದಾರರು ಅಲ್ಲವೆ?

    ಮಕ್ಕಳಾಗಿಲ್ಲವೆಂದು ಇನ್ನೊಂದು ಮದ್ವೆಯಾದರೆ ಇಬ್ರಿಗೂ ಮಕ್ಕಳಾದವು: ಈಗ ಆಸ್ತಿಯ ಭಾಗ ಹೇಗೆ?

    ಅಜ್ಜ ಕೊಟ್ಟ ಆಸ್ತಿಯನ್ನು ತಾಯಿ ಚಿಕ್ಕ ಮಗಳ ಹೆಸರಿಗೆ ಮಾಡಿದ್ದಾರೆ- ನಮಗೆಲ್ಲಾ ಪಾಲು ಸಿಗಲ್ವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts