ಕಾಂಗ್ರೆಸ್‌ನಲ್ಲಿ ಅಲ್ಲೋಲ- ಕಲ್ಲೋಲ: ಸಿಂಗ್‌ ಹಾದಿ ತುಳಿದ ಸಿಧು! ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

sidhu
Published on

ಅಮೃತಸರ (ಪಂಜಾಬ್‌): ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಮುಖ್ಯಮಂತ್ರಿ ಸ್ಥಾನವನ್ನು ತೊರೆದ ಬೆನ್ನಲ್ಲೇ ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾತು ದಟ್ಟವಾಗುತ್ತಿದ್ದಂತೆಯೇ, ಕಾಂಗ್ರೆಸ್‌ಗೆ ಇನ್ನೊಂದು ಶಾಕ್‌ ಎದುರಾಗಿದೆ. ಅದೇನೆಂದರೆ ಪಂಜಾಬ್​ ಕಾಂಗ್ರೆಸ್​ ಪ್ರದೇಶ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್​ ಸಿಂಗ್​ ಸಿಧು ರಾಜೀನಾಮೆ ನೀಡಿದ್ದಾರೆ.

ಪಂಜಾಬ್​ ರಾಜ್ಯದ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವ ಹೊತ್ತಿನಲ್ಲೇ ಪಕ್ಷದೊಳಗಿನ ಆಂತರಿಕ ಸಮರ ಸ್ಫೋಟಗೊಂಡಿದ್ದು, ಕಾಂಗ್ರೆಸ್‌ನಲ್ಲಿ ಭಾರಿ ಅಲ್ಲೋಲ ಕಲ್ಲೋಲವಾಗಿದೆ. ತಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಸಿಧು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ​ ಸೋನಿಯಾ ಗಾಂಧಿಯವರಿಗೆ ಅವರು ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಇದಾಗಲೇ ಸಿಧು ಆಮ್​ ಆದ್ಮಿ ಪಕ್ಷವನ್ನು ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ.

ಅಂದಹಾಗೆ ನವಜೋತ್​ ಸಿಂಗ್​ ಸಿಧು ಮತ್ತು ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಅವರದ್ದು ಎರಡು ಬಣಗಳಾಗಿದ್ದವು. ಪಾಕಿಸ್ತಾನದ ಪ್ರೇಮಿಯಾಗಿರುವ ಸಿಧು ಅವರನ್ನು ಯಾವುದೇ ಕಾರಣಕ್ಕೆ ಮುಖ್ಯಮಂತ್ರಿ ಮಾಡಬಾರದು ಎಂದು ಅಮರೀಂದರ್‌ ಸಿಂಗ್‌ ಆಗ್ರಹಿಸಿದ್ದರು. ಒಂದು ವೇಳೆ ಸಿಧು ಮುಖ್ಯಮಂತ್ರಿಯಾದರೆ ದೇಶಕ್ಕೆ ಅಪಾಯ ಕಟ್ಟಿಟ್ಟದ್ದೇ ಎಂದಿದ್ದರು. ಆದರೆ ಸಿಧು ಸಿಎಂ ಗಾದಿಯನ್ನು ಒಲಿಸಿಕೊಳ್ಳುವ ತವಕದಲ್ಲಿದ್ದರು. ಆದರೆ ಕಾಂಗ್ರೆಸ್‌ ಚರಂಜೀತ್​ ಸಿಂಗ್​ ಚನ್ನಿಯವರನ್ನು ಸಿಎಂ ಮಾಡಿತು.

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ ಚನ್ನಿ ಅವರು ಕೂಡ ಸಿಧು ಬಣದಲ್ಲಿದ್ದರು. ಆದ್ದರಿಂದ ಅವರ ಸಿಎಂ ಆದರೆ ಸಿಧು ಪಂಜಾಬ್​ನ ಸೂಪರ್​ ಸಿಎಂ ಆಗಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಮುಖ್ಯಮಂತ್ರಿ ಸ್ಥಾನ ಏರುತ್ತಲೇ ಚನ್ನಿ ಅವರು ಸಿಧು ಅವರ ಮಾತನ್ನು ಕೇಳುವುದನ್ನು ನಿಲ್ಲಿಸಿದ್ದರು. ಇದರಿಂದ ಸಿಧು ಕೋಪ ತಾರಕ್ಕೇರಿದ್ದು, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net