ಬ್ಲಾಕ್‌ನಲ್ಲಿ ಟಿಕೆಟ್‌ ಮಾರಾಟ: ಇದುವರೆಗೆ ಹೇಳಿರದ ಬಹುದೊಡ್ಡ ಸೀಕ್ರೆಟ್‌ ರಟ್ಟು ಮಾಡಿದ ಚನ್ನಣ್ಣನವರ್‌

ravi channanavar
Published on

ಬೆಂಗಳೂರು: ಐಪಿಎಸ್‌ ಅಧಿಕಾರಿ ರವಿ ಡಿ.ಚನ್ನಣ್ಣನವರ್‌ ಎಂದರೆ ದಕ್ಷ ಅಧಿಕಾರಿಯೆಂದೇ ಹೆಸರು ಮಾಡಿದವರು. ಪೊಲೀಸ್ ಅಧಿಕಾರಿಯಾಗಿ ಬಹುದೊಡ್ಡ ಹೆಸರು ಮಾಡಿರುವ ಇವರನ್ನು ಅದೆಷ್ಟೋ ಮಂದಿ ಅನುಸರಿಸುತ್ತಿದ್ದಾರೆ. ಇವರ ಅಭಿಮಾನಿ ಬಳಗವೂ ಭಾರಿ ದೊಡ್ಡದಿದೆ.

ಇಂಥ ಅಧಿಕಾರಿಯೊಬ್ಬರು ಇದೀಗ ತಮ್ಮ ಜೀವನದ ಬಹುದೊಡ್ಡ ಸೀಕ್ರೆಟ್‌ ಒಂದನ್ನು ರಟ್ಟು ಮಾಡಿದ್ದಾರೆ. ಅದೇನೆಂದರೆ, ಒಂದು ಕಾಲದಲ್ಲಿ ಸಿನಿಮಾದ ಬ್ಲಾಕ್​ ಟಿಕೆಟ್​ ಮಾರುತ್ತಿದ್ದರು! ಇದು ನಿಜವಾಗಿಯೂ ಹೌದಾ ಎಂದು ಅಚ್ಚರಿಪಡುವವರೇ ಹೆಚ್ಚು. ಆದರೆ ಇಂಥದ್ದೊಂದು ಗುಟ್ಟನ್ನು ಖುದ್ದು ಅವರೇ ರಿವೀಲ್‌ ಮಾಡಿದ್ದಾರೆ.

ಡಾರ್ಲಿಂಗ್​ ಕೃಷ್ಣ, ನಿಶ್ವಿಕಾ ಕಾಯ್ಡು ಮತ್ತು ಮೇಘಾ ಶೆಟ್ಟಿ ನಟಿಸಲಿರುವ ‘ದಿಲ್​ ಪಸಂದ್​’ ಸಿನಿಮಾದ ಸುದ್ದಿಗೋಷ್ಠಿಗೆ ಬಂದಿದ್ದ ಅವರು ತಮಗೂ ಸಿನಿಮಾಕ್ಕೂ ಇರುವ ನಂಟಿನ ಬಗ್ಗೆ ಮಾತನಾಡುತ್ತಾ ಈ ಗುಟ್ಟನ್ನು ರಟ್ಟು ಮಾಡಿದರು. ತಮ್ಮ 13 ವರ್ಷಗಳ ಸೇವಾ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಸಿನಿಮಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿರುವ ಬಗ್ಗೆ ಉಲ್ಲೇಖಿಸಿದ ಅವರು, ಸಾಹಿತ್ಯ, ಸಿನಿಮಾ, ನಾಟಕಕ್ಕೂ ತಮಗೂ ಇರುವ ನಂಟಿನ ಬಗ್ಗೆ ವಿವರಣೆ ನೀಡಿದರು.

ಇದೇ ಸಂದರ್ಭದಲ್ಲಿ ಬ್ಲಾಕ್‌ ಟಿಕೆಟ್‌ ಗುಟ್ಟನ್ನೂ ಹೇಳಿದರು. 'ನಾನು ಎಲ್ಲೂ ಹೇಳಲಾರದ ಒಂದು ಸತ್ಯವನ್ನು ಈ ವೇದಿಕೆಯಲ್ಲಿ ಹೇಳುತ್ತಿದ್ದೇನೆ, ಗದಗಿನ ಬ್ಲಾಕ್ ಮಹಾಲಕ್ಷ್ಮೀ, ಶಾಂತಿ, ಕರ್ನಾಟಕ ಥಿಯೇಟರ್‌ನಲ್ಲಿ ಬ್ಲಾಕ್ ಟಿಕೆಟ್ ಮಾರಾಟ ಮಾಡಿದ್ದೆ. 'ಅಸುರ' ತೆರೆಕಂಡಾಗ ನಾನು ಪಿಯುಸಿ ಓದುತ್ತಿದ್ದೆ, ಆಗ ನಾನು ಬ್ಲಾಕ್ ಟಿಕೆಟ್ ಮಾರಿದ್ದೆ. 'ಯಜಮಾನ', 'ದಿಲ್ ಕಾ ರಿಶ್ತಾ', 'ಅಂಜಲಿ ಗೀತಾಂಜಲಿ' ಸಿನಿಮಾಗಳು ಬಂದಾಗ ಹುಬ್ಬಳ್ಳಿಯಿಂದ ತೆಗೆದುಕೊಂಡು ಬರುತ್ತಿದ್ದೆ. ಥಿಯೇಟರ್‌ ಅನ್ನೋದು ನನ್ನ ಹವ್ಯಾಸಗಳಲ್ಲಿ ಒಂದು' ಎಂದು ರವಿ ಡಿ. ಚನ್ನಣ್ಣನವರ್‌ ಹೇಳಿದರು.

ಅದೇ ರೀತಿ ನಟನೆ, ಬರವಣಿಗೆ, ಸಿನಿಮಾ ಬಗ್ಗೆ ಅಪಾರ ಆಸಕ್ತಿ ಇದೆ. ಹಲವು ನಾಟಕಗಳಲ್ಲಿ ನಾನು ಅಭಿನಯಿಸಿದ್ದೆನೆ. ಕಾಲೇಜು ದಿನಗಳಿಂದಲೂ ಸಿನಿಮಾಗಳು ಬಹಳ ಪ್ರಭಾವ ಬೀರಿವೆ. ಡಾ. ರಾಜ್​ಕುಮಾರ್​ ಅವರ ‘ಮಯೂರ’ ಸಿನಿಮಾ ನೋಡಿ ಅವರು ಸ್ವಾಭಿಮಾನದ ಪಾಠ ಕಲಿತೆ ಎಂಬ ಕೆಲವು ಘಟನೆಗಳನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.

ನಾನು ಅನೇಕ ಕಥೆಗಳನ್ನು ಅವರು ಬರೆದಿದ್ದು, ಅವು ಇನ್ನೂ ಪ್ರಕಟಗೊಂಡಿಲ್ಲ. ಬರೆದ ಪುಸ್ತಕವನ್ನು ಜನರು ಓದುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ. ಒಬ್ಬ ಮಹಾನ್‌ ವ್ಯಕ್ತಿ ಹೇಳಿದ ಮಾತುಗಳನ್ನು ಜನರು ನೆನಪಿಲ್ಲಿ ಇಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾ ಡೈಲಾಗ್‌ಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ನಾನು ಕಾಲೇಜಿನಲ್ಲಿರುವಾಗ 'ಆರ್ಯ' ಸಿನಿಮಾ ರಿಲೀಸ್ ಆಗಿತ್ತು. ಆಗ ಎಲ್ಲರೂ ಅದರ ಡೈಲಾಗ್‌ಗಳನ್ನು ಹೇಳುತ್ತಿದ್ದರು' ಎನ್ನುವ ವಿಷಯವನ್ನೂ ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಅಂದಹಾಗೆ, 'ದಿಲ್ ಪಸಂದ್' ಸಿನಿಮಾವನ್ನು ಶಿವ ತೇಜಸ್ ನಿರ್ದೇಶಿಸುತ್ತಿದ್ದಾರೆ. ಸುಮಂತ್ ಕ್ರಾಂತಿ ನಿರ್ಮಾಣ ಮಾಡುತ್ತಿದ್ದು, ಡಾರ್ಲಿಂಗ್ ಕೃಷ್ಣ ಹೀರೋ, ನಿಶ್ವಿಕಾ ನಾಯ್ಡು ಮತ್ತು ಜೊತೆ ಜೊತೆಯಲಿ ಧಾರಾವಾಹಿಯ ಮೇಘಾ ಶೆಟ್ಟಿ ನಾಯಕಿಯರಾಗಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ, ರಂಗಾಯಣ ರಘು, ತಬಲ ನಾಣಿ, ಸಾಧು ಕೋಕಿಲ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net