ಸಿಎಂ ಪಟ್ಟ ತೊರೆದ ಅಮರೀಂದರ್‌ ಸಿಂಗ್‌ ಕೇಂದ್ರದ ಕೃಷಿ ಸಚಿವ? ಕುತೂಹಲ ಮೂಡಿಸಿದೆ ನಾಯಕನ ನಡೆ!

modi
Published on

ನವದೆಹಲಿ: ಪಂಜಾಬ್ ಕಾಂಗ್ರೆಸ್‌ನಿಂದ ಭಾರಿ ಅಸಮಾಧಾನಗೊಂಡು ನಂತರ ಮುಖ್ಯಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದ ಕ್ಯಾಪ್ಟನ್ ಅಮರೀಂದರ್‌ ಸಿಂಗ್‌ ಪಕ್ಷವನ್ನೇ ಬಿಟ್ಟು ಬಿಜೆಪಿ ಸೇರಲಿದ್ದಾರೆ ಎಂಬ ಭಾರಿ ಸುದ್ದಿ ರಾಜಕೀಯ ವಲಯದಲ್ಲಿ ಸುಳಿದಾಡುತ್ತಿದೆ. ಅಷ್ಟೇ ಅಲ್ಲದೇ ಅವರಿಗೆ ಪ್ರಧಾನಿ ಮೋದಿ ಸಂಪುಟದಲ್ಲಿ ಕೇಂದ್ರ ಕೃಷಿ ಸಚಿವ ಸ್ಥಾನ ಸಿಗಲಿದೆ ಎಂಬ ವದಂತಿ ದಟ್ಟವಾಗಿದೆ.

ಇದಕ್ಕೆ ಕಾರಣ ಅವರು ದೆಹಲಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ.

ಪಂಜಾಬ್​ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಬಣ ಹಾಗೂ ಅಮರೀಂದರ್ ಸಿಂಗ್ ಬಣದ ನಡುವೆ ನಡೆದ ಮುಸುಕಿನ ಗುದ್ದಾಟದಲ್ಲಿ ಸಿಧು ಬಣವೇ ವಿಜಯ ಸಾಧಿಸಿತ್ತು. ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದ ನವಜೋತ್ ಸಿಂಗ್ ಸಿಧು ತಮ್ಮದೇ ಬಣದ ಚರಣ್​ಜಿತ್ ಸಿಂಗ್ ಛನ್ನಿಯನ್ನು ಸಿಎಂ ಪಟ್ಟದಲ್ಲಿ ಕುಳ್ಳರಿಸಿದ್ದಾರೆ. ಮಾತ್ರವಲ್ಲದೇ ಛನ್ನಿ ಸರ್ಕಾರದಲ್ಲಿ ಅಮರೀಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಐವರನ್ನು ಕೈಬಿಡಲಾಗಿದೆ. ಇದರಿಂದಾಗಿ ಅಮರೀಂದರ್ ಸಿಂಗ್ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದರು.

ಇದೀಗ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ಅವರ ದೆಹಲಿ ಭೇಟಿ ಪುಷ್ಟಿ ನೀಡುವಂತಿದೆ. ಆದರೆ ಅಮರಿಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಸಿಂಗ್‌ ಅವರು ವೈಯಕ್ತಿಕ ಭೇಟಿಗೆ ದೆಹಲಿಗೆ ಹೋಗಿದ್ದಾರಷ್ಟೇ. ಇದರಲ್ಲಿ ರಾಜಕೀಯವೇನೂ ಇಲ್ಲ. ಅಲ್ಲಿ ಅವರು ತಮ್ಮ ಸ್ನೇಹಿತರನ್ನು ಭೇಟಿ ಮಾಡಲಾಗಿದ್ದಾರೆ ಎಂದಿದ್ದಾರೆ.

ಆದರೆ ಪಂಜಾಬ್‌ ರೈತರು ಒಂದೆಡೆ ಕೇಂದ್ರ ಕೃಷಿ ಕಾನೂನಿನ ವಿರುದ್ಧ ತಿರುಗಿಬಿದ್ದಿರುವ ಈ ಸಂದರ್ಭದಲ್ಲಿ ಸಿಂಗ್‌ ಅವರು ಕೃಷಿ ಸಚಿವರಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಡಿದ್ದು, ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net