ಎಸ್​. ನಾರಾಯಣ್​ ಪುತ್ರ ಪವನ್​ ಈಗ ನಿರ್ದೇಶಕ!

Navami - Final
Published on

ಬೆಂಗಳೂರು: ಎಸ್​. ನಾರಾಯಣ್​ ಅವರ ಎರಡನೆಯ ಮಗ ಪವನ್ ನಾರಾಯಣ್​​, ಕಳೆದ ವರ್ಷ 'ಮುತ್ತು ರತ್ನ' ಎಂಬ ಚಿತ್ರದ ಮೂಲಕ ಹೀರೋ ಆಗಿದ್ದು ಗೊತ್ತಿರಬಹುದು. ಆ ಚಿತ್ರ ಇನ್ನಷ್ಟೇ ಮುಗಿದು, ಬಿಡುಗಡೆಯಾಗಬೇಕಿದೆ. ಈ ಮಧ್ಯೆ, 'ನವಮಿ 9.9.1999' ಎಂಬ ಹಾರರ್​ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

ಲಾಕ್​ಡೌನ್​ನಿಂದಾಗಿ ಹಲವು ತಿಂಗಳುಗಳ ಕಾಲ ಚಿತ್ರೀಕರಣ ಚಟುವಟಿಕೆಗಳೆಲ್ಲಾ ಬಂದ್​ ಆಗಿದ್ದವು. ಈಗ ಕ್ರಮೇಣ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿದ್ದು, ನವರಾತ್ರಿಯ ಶುಭ ಸಂದರ್ಭದಲ್ಲಿ 'ನವಮಿ 9.9.1999' ಚಿತ್ರದ ಫಸ್ಟ್ ಲುಕ್ ಹಾಗೂ ಪೋಸ್ಟರ್ ಬಿಡುಗಡೆ ಸಹ ಬಿಡುಗಡೆಯಾಗಿದೆ.

ವಿಶೇಷವೆಂದರೆ, ಆಯುಧ ಪೂಜೆಯ ಶುಭದಿನದಂದು ಕನ್ನಡ ಚಿತ್ರರಂಗದ ಒಂಬತ್ತು ಖ್ಯಾತ ನಿರ್ದೇಶಕರಿಂದ ಈ ಟೈಟಲ್​ ಮತ್ತು ಫಸ್ಟ್​ ಲುಕ್​ ಬಿಡುಗಡೆ ಮಾಡಿಸಲಾಗಿದೆ. ಎಸ್ ನಾರಾಯಣ್, ಶಶಾಂಕ್, ರವಿ ಶ್ರೀವತ್ಸ, ಸಿಂಪಲ್ ಸುನಿ, ಪವನ್ ಒಡೆಯರ್, ಎ.ಪಿ.ಅರ್ಜುನ್, ಚಂದ್ರಶೇಖರ್ ಬಂಡಿಯಪ್ಪ, ಕದರ್ ಕುಮಾರ್ ಹಾಗೂ ಅಭಿರಾಮ್ ಅವರು ಟೈಟಲ್, ಪೋಸ್ಟರ್, ಫಸ್ಟ್ ಲುಕ್ ಲಾಂಚ್ ಮಾಡಿದ್ದಾರೆ.

ಈಗಾಗಲೇ 'ನವಮಿ 9.9.1999' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಈ ಹಿಂದೆ 'ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್' ಹಾಗೂ 'ಕ್ರಿಟಿಕಲ್ ಕೀರ್ತನೆಗಳು' ಚಿತ್ರಗಳಲ್ಲಿ ನಟಿಸಿರುವ ಯಶಸ್​, ಹೀರೋ ಆಗಿ ನಟಿಸುತ್ತಿದ್ದಾರೆ. ಪವನ್ ನಾರಾಯಣ್ ಹಾಗೂ ಯಶಸ್ ಅಭಿಯವರು ರಂಗಭೂಮಿಯ ಕಲಿಕೆ ದಿನಗಳಿಂದಲೂ ಉತ್ತಮ ಸ್ನೇಹಿತರಾಗಿದ್ದು, ಈ ಚಿತ್ರದ ಮುಖಾಂತರ ತಮ್ಮ ಪ್ರತಿಭೆ ತೋರಿಸುವುದಕ್ಕೆ ಮುಂದಾಗಿದ್ದಾರೆ.

ಚಿತ್ರದಲ್ಲಿ ನಂದಿನಿ ಗೌಡ ನಾಯಕಿಯಾಗಿದ್ದು, ಎಸ್.ನಾರಾಯಣ್, ಶಂಕರ್ ಅಶ್ವಥ್, ಓಂಪ್ರಕಾಶ್ ರಾವ್, ಹುಚ್ಚ ವೆಂಕಟ್, ಸಂದೀಪ್, ಅನುಶ್ರಿ, ಪವಿತ್ರ, ಕುರಿಬಾಂಡ್ ಸುನೀಲ್, ಅರುಣ ಬಾಲರಾಜ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net