

ಉತ್ತರ: ನಿಮ್ಮ ಎಂಟು ಪುಟಗಳ ಪತ್ರ ಓದಿ ನನಗೆ ಎರಡು ಅನುಮಾನಗಳು ಬರುತ್ತಿವೆ. ಒಂದು, ಆಕೆ ಹೇಳಿದ ಯಾವ ಕಥೆಯೂ ನಡೆದೇ ಇಲ್ಲದಿರಬಹುದು. ಸುಮ್ಮನೇ ನಿಮ್ಮ ಪ್ರೀತಿ, ಅನುಕಂಪ ಹಾಗೂ ನಿಮ್ಮಿಂದ ಹಣವನ್ನು ಸೆಳೆಯಲು ಹೀಗೆಲ್ಲಾ ನಾಟಕವಾಡುತ್ತಿರಬಹುದು. ಇನ್ನೊಂದು, ಆಕೆಯ ಬದುಕಿನಲ್ಲಿ ನಿಜವಾಗಿಯೂ ಹಾಗೆಲ್ಲಾ ನಡೆದೇ ಇದ್ದರೆ ಅದರ ಮಧ್ಯದಲ್ಲಿ ನಿಮ್ಮನ್ನು ಸಿಕ್ಕಿಸಿ, ನಿಮ್ಮಿಂದ ಹಣ ದಕ್ಕಿಸಿಕೊಂಡು ತಾವು ಪಾರಾಗುವ ಉಪಾಯವನ್ನೂ ಮಾಡುತ್ತಿರಬಹುದು. ನೀವು ಜಾಣರು. ಆಕೆ ಕೇಳಿದ ತಕ್ಷಣ ಹಣ ಕೊಟ್ಟಿಲ್ಲ. ಆದರೂ ನಿಮ್ಮ ಮನಸ್ಸಿನಲ್ಲಿ ಆಕೆಗೆ ಸಹಾಯ ಮಾಡುವ ವಿಚಾರವಿದೆ. ಸಹಾಯ ಖಂಡಿತವಾಗಿಯೂ ಮಾಡಬಹುದು. ಆಕೆ ಹೇಳುವ ಘಟನೆಗಳು ನಿಜಕ್ಕೂ ನಡೆದಿದ್ದರೆ, ನೀವು ಅವರಿಗೆ ಹೀಗೆ ಸಹಾಯ ಮಾಡಬಹುದು. ಅವೆಂದರೆ ಒಂದು, ಸೈಬರ್ ಪೊಲೀಸರಿಗೆ ಕಂಪ್ಲೇಂಟ್ ಕೊಡುವುದು ಮತ್ತು ಇನ್ನೊಂದು, ಅಪರಾಧ ಪ್ರಕರಣಗಳನ್ನು ನಡೆಸುವ ಕ್ರೖೆಂ ಲಾಯರ್ ಬಳಿ ಸಲಹೆ ತೆಗೆದುಕೊಳ್ಳುವುದು.
‘ಮಾನ ಹೋಗುತ್ತದೆ’, ‘ಗಂಡನಿಗೆ ತಿಳಿಯುತ್ತದೆ’ ಇಂಥಾ ನೆವಗಳನ್ನು ಆಕೆ ಕೊಡಬಾರದು. ಇವೆಲ್ಲಾ ಜಾಗ್ರತೆ ಇಂಥಾ ಕೆಟ್ಟ ಕೆಲಸಗಳನ್ನು ಮಾಡುವ ಮೊದಲೇ ಇರಬೇಕಿತ್ತು. ಸಮಾಜ ವಿಧಿಸಿರುವ ನ್ಯಾಯ ಮಾರ್ಗದಲ್ಲಿ ನಡೆಯದೇ ‘ಕಾಮಾತುರಾಣಂ ನ ಭಯಾ ನ ಲಜ್ಜಾ’ ಎನ್ನುವಂತೆ ನಾಚಿಕೆ, ಗೌರವ ಎಲ್ಲವನ್ನೂ ಗಾಳಿಗೆ ತೂರಿ, ಪರಪುರುಷನ ತೋಳಿಗೆ ಆಕೆ ಸೇರಿದ್ದೇಕೆ? ಈಗ ಮಾನ ಮರ್ಯಾದೆ ಎಂದು ಹಲುಬುವುದೇಕೆ? ನೀರಿನಲ್ಲಿ ಬಿದ್ದವರಿಗೆ ಮಳೆಯೇನು? ಚಳಿಯೇನು? ಅಪರಾಧ ಮಾಡುತ್ತಿರುವವನನ್ನು ಬಯಲಿಗೆಳೆಯಲು ಇವರೂ ಬಯಲಿಗೆ ಬರಲೇ ಬೇಕಾಗುತ್ತದೆ. ಅದು ಬಿಟ್ಟು ನಿಮ್ಮಂಥವರನ್ನು ಮಧ್ಯೆ ಸಿಕ್ಕಿಸಿ, ನಿಮ್ಮಿಂದ ಹಣ ಪಡೆದು ಅವನ ಬಾಯಿ ಮುಚ್ಚಿಸಲು ಎಲ್ಲಿಯವರೆಗೆ ಸಾಧ್ಯ? ನನಗಿರುವ ಮತ್ತೊಂದು ಅನುಮಾನವೆಂದರೆ ಆಕೆ ಮಹಾ ಘಾಟಿಯಿದ್ದ ಹಾಗಿದೆ. ನಿಮ್ಮಂಥ ಯುವಕರನ್ನು ಪ್ರೀತಿಯ ಬಲೆಯಲ್ಲಿ ಸಿಕ್ಕಿಸಿ ದೇಹಸುಖ ಮತ್ತು ಹಣ ಪಡೆಯುವ ಹುನ್ನಾರವನ್ನು ಬೇಕಾದಷ್ಟು ನಡೆಸಿರಬಹುದು. ನೀವೀಗ ಎಚ್ಚರಿಕೆಯಿಂದ ಈ ಸಿಕ್ಕಿನಿಂದ ಬಿಡಿಸಿಕೊಳ್ಳಬೇಕು. ಅವಳಿಗೆ ತೊಂದರೆ ಕೊಡುವವನಿಗೆ ಬುದ್ಧಿ ಕಲಿಸಬೇಕು ಎಂದೆಲ್ಲಾ ಯೋಚಿಸುವುದನ್ನು ಬಿಡಿ. ಮೊದಲು ಆಂಟಿಯ ನಂಬರ್ ಅನ್ನು ನಿಮ್ಮ ವಾಟ್ಸ್ ಆಪ್ನಿಂದ ಕಿತ್ತುಹಾಕಿ. ಅದಕ್ಕೂ ಮೊದಲು ಆಕೆಯನ್ನು ಮುಖತಃ ಭೇಟಿ ಮಾಡಿ ‘ಇದು ನಿಮ್ಮ ಜೀವನ ಮತ್ತು ನೀವು ಮಾಡಿಕೊಂಡಿರುವ ಘೂಟಾವಳಿ. ಅದನ್ನು ನೀವೇ ಸರಿಪಡಿಸಿಕೊಳ್ಳಿ.
ನಾನು ನಿಮ್ಮ ಪಕ್ಕದ ಮನೆಯ ಹುಡುಗ ಅಷ್ಟೇ, ನನಗೆ ನಿಮ್ಮ ಬಗ್ಗೆ ಯಾವ ಪ್ರೀತಿಯೂ ಇಲ್ಲ. ಇನ್ನೂ ನನ್ನನ್ನು ಬಲವಂತ ಮಾಡಿದರೆ ನಾನು ನಿಮ್ಮ ಮೆಸೇಜ್ಗಳನ್ನು ನಿಮ್ಮ ಗಂಡನಿಗೆ ಕಳಿಸುತ್ತೇನೆ’ ಎಂದು ಧೃಡವಾಗಿ ಮತ್ತು ಧೈರ್ಯವಾಗಿ ಹೇಳಿ.
ಯಾವುದಾದರೂ ಹೆಣ್ಣು ತನ್ನ ದುಃಖವನ್ನು ಹೇಳಿಕೊಂಡರೆ ಮಂಜುಗಡ್ದೆಯಂತೆ ಕರಗಿಬಿಡುವ ನಿಮ್ಮಂಥ ಮೆದು ಮನಸ್ಸಿನ ಮತ್ತು ಈ ವಯಸ್ಸಿನ ಗಂಡುಮಕ್ಕಳನ್ನು ಆಟವಾಡಿಸುವ ನಾಚಿಕೆಯೇ ಇಲ್ಲದ ಹೆಂಗಸರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗುತ್ತಿರುವುದು ವಿಷಾದ.
ಡಾ.ಶಾಂತಾ ನಾಗರಾಜ್ ಅವರ ಇನ್ನಷ್ಟು ಸಲಹೆಗಳಿಗೆ ಕ್ಲಿಕ್ಕಿಸಿ: