ಮುಕೇಶ್​ ಅಂಬಾನಿ ಕುಟುಂಬಸ್ಥರಿಗೆ ಶಾಕ್​ ನೀಡಿದ ಸೆಬಿ: 25 ಕೋಟಿ ರೂಪಾಯಿ ದಂಡ

SEBI
Published on

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಿಯಮಾವಳಿಗಳ ಉಲ್ಲಂಘನೆ ಮಾಡಿರುವ ಮುಕೇಶ್‌ ಮತ್ತು ಅನಿಲ್‌ ಅಂಬಾನಿ ಹಾಗೂ ಅವರ ಕುಟುಂಬ ಸದಸ್ಯರಿಗೆ 25 ಕೋಟಿ ರೂ ದಂಡ ವಿಧಿಸಲಾಗಿದೆ.

ಎರಡು ದಶಕಗಳ ಹಿಂದಿನ ಪ್ರಕರಣ ಇದಾಗಿದೆ. ಮುಕೇಶ್ ಅಂಬಾನಿ, ಅನಿಲ್ ಅಂಬಾನಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ದಂಡವನ್ನು ವಿಧಿಸಲಾಗಿದೆ. ಮುಕೇಶ್ ಮತ್ತು ಅನಿಲ್ ಅಂಬಾನಿ ಸೇರಿದಂತೆ ನೀತಾ ಅಂಬಾನಿ, ಟಿನಾ ಅಂಬಾನಿ, ಕೆ. ಡಿ. ಅಂಬಾನಿ ಅವರಿಗೆ ದಂಡ ವಿಧಿಸಲಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ 12 ಕೋಟಿ ಷೇರುಗಳ ವಿತರಣೆಗೆ ಸಂಬಂಧಿಸಿದಂತೆ ಅಕ್ರಮ ನಡೆದಿದೆ ಎಂದು 2000ನೇ ಸಾಲಿನಲ್ಲಿ ಬಂದಿರುವ ದೂರಿನ ವಿವಾದ ಇದಾಗಿದೆ. ಧೀರೂಬಾಯಿ ಅಂಬಾನಿಯವರು ಮೃತಪಟ್ಟ ನಂತರ 2005ರಲ್ಲಿ ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಆದರೆ ಈ ನಡುವೆಯೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು.

1994ರಲ್ಲಿ 3 ಕೋಟಿ ವಾರೆಂಟ್‌ಗಳನ್ನು ಹಿಂದಿರುಗಿಸುವ ಮೂಲಕ ರಿಯಲಯನ್ಸ್​ನ ಪ್ರವರ್ತಕರು ಪಾಲನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪವಿತ್ತು. ಈ ವೇಳೆ ಶೇ.5ಕ್ಕಿಂತ ಹೆಚ್ಚು ಷೇರುಗಳ ಸ್ವಾಧೀನದ ಬಗ್ಗೆ ಮಾಹಿತಿಯನ್ನು ಒದಗಿಸುವಂತೆ ಸೆಬಿ ಕೇಳಿತ್ತು. ಆದರೆ ಅದನ್ನು ಒದಗಿಸಲು ರಿಲಯನ್ಸ್ ಪ್ರವರ್ತಕರು ವಿಫಲರಾಗಿದ್ದರು.

ಮುಕೇಶ್ ಅಂಬಾನಿ, ನೀತಾ ಅಂಬಾನಿ, ಅನಿಲ್ ಅಂಬಾನಿ, ಟೀನಾ ಅಂಬಾನಿ, ಮುಕೇಶ್ ಅಂಬಾನಿ ಮಕ್ಕಳಾದ ಆಕಾಶ್ ಮತ್ತು ಇಶಾ ಸೇರಿದಂತೆ 36 ಮಂದಿ ರಿಯಲನ್ಸ್​ ಪ್ರವರ್ತಕರ ವಿರುದ್ಧ 2011 ರಲ್ಲಿ ನ್ಯಾಯ ನಿರ್ಣಯ ಪ್ರಕ್ರಿಯೆ ಆರಂಭಿಸಲಾಗಿತ್ತು. ಇದರ ವಿರುದ್ಧ ಅಂಬಾನಿ ಕುಟುಂಬ ಕೋರ್ಟ್​ ಮೆಟ್ಟಿಲೇರಿತ್ತು. ಆದರೆ ಅವರ ಪರವಾಗಿ ತೀರ್ಪು ಬಂದಿರಲಿಲ್ಲ.

2011ರ ಸೆಬಿ ನಿಯಮಾವಳಿಗಳ ಉಲ್ಲಂಘನೆ, ಸ್ವಾಧೀನದ ನಿಯಮಗಳ ನಿಯಂತ್ರಣ ಸಂಖ್ಯೆ 11 (1) ರ ಪ್ರಕಾರ, ಸಾರ್ವಜನಿಕ ಪ್ರಕಟಣೆ ನೀಡದ ಹೊರತಾಗಿ ಮತದಾನದ ಹಕ್ಕಿನ ಶೇ.5ಕ್ಕೂ ಹೆಚ್ಚು ಹೆಚ್ಚುವರಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಆರ್‌ಐಎಲ್‌ ಗೆ ನಿರ್ಬಂಧ ಹೇರಲಾಗಿತ್ತು. ಇದರ ಹೊರತಾಗಿಯೂ ನಿಯಮ ಬಾಹಿರ ಕೃತ್ಯ ನಡೆದಿರುವುದಾಗಿ ಸೆಬಿ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net