

ನನಗೂ ತಡವಾಗಿಯಾದರೂ ಒಂದು ಮದುವೆ ಅಂತ ಆಗುತ್ತಿದೆಯಲ್ಲ, ನನ್ನದೇ ಮನೆಯಲ್ಲಿ ನನ್ನವರ ನಡುವೆ ಬದುಕಬಹುದಲ್ಲ ಎಂದು ಖುಷಿಯಾಗಿತ್ತು. ಆದರೆ ಇಲ್ಲಿಗೆ ಬಂದಮೇಲೆ ನನ್ನ ಕನಸೆಲ್ಲಾ ಕೇವಲ ಕನಸು ಎಂದು ಅರಿವಾಗುತ್ತಿದೆ. ನನ್ನವರು ಬೆಳಿಗ್ಗೆ 8.30 ತಿಂಡಿ ತಿಂದು ಊಟ ಕಟ್ಟಿಕೊಂಡು ಕೆಲಸಕ್ಕೆ ಹೋದರೆ ಬರುವುದು ಸಂಜೆ 7ಕ್ಕೆ. ನಂತರ ಟೀ ಕುಡಿದು ಮತ್ತೆ ಹೊರಗೆ ಹೋದರೆ ರಾತ್ರಿ ಮಲಗುವ ಹೊತ್ತಿಗೆ ವಾಪಸ್ ಬರುತ್ತಾರೆ. ನನ್ನೊಂದಿಗೆ ಮಾತಿಲ್ಲ ಕಥೆಯಿಲ್ಲ. ಈ ಆರುವರ್ಷಗಳಲ್ಲಿ ಕೆಲವೇ ಬಾರಿ ದೇವಸ್ಥಾನಕ್ಕೆ ಹೋಗಿರುವುದು ಬಿಟ್ಟರೆ ನನ್ನನ್ನು ಎಲ್ಲಿಗೂ ಕರೆದುಕೊಂಡು ಹೋಗಿಲ್ಲ. ಆದರೆ ಅಗಾಗ್ಗೆ ನನ್ನನ್ನು ಹೀನಾಯಮಾನವಾಗಿ ಬಯ್ಯುವುದು ಮಾತ್ರ ಮಾಡುತ್ತಾರೆ.
ನಾನು ಏನನ್ನೂ ಕೇಳಬಾರದು, ಮಾತೇ ಆಡಬಾರದು, ಆಡಿದರೆ ಅವರಿಂದ ಸಿಗುವುದು ಬಯ್ಗುಳವೇ. ನನ್ನ ಮಲಮಕ್ಕಳನ್ನು ನನ್ನ ಸ್ವಂತ ಮಕ್ಕಳೆಂದೇ ತಿಳಿದು ಸ್ನೇಹದಿಂದ ಮಾತಾಡಿಸುತ್ತೇನೆ. ಆದರೆ ಅವರಿಗೂ ನನ್ನ ಸ್ನೇಹ ಬೇಕಿಲ್ಲ. ನಾನು ಹತ್ತು ಮಾತಾಡಿದರೆ ಒಂದುತ್ತರ ಕೊಡುತ್ತಾರೆ. ನಾನು ಮಾಡುವ ಅಡುಗೆಯನ್ನು ಕೆಲವೊಮ್ಮೆ ಊಟ ಮಾಡುತ್ತಾರೆ. ಕೆಲವು ಸಲ ಬೇಡವೆಂದು ಬಿಡುತ್ತಾರೆ. ಹಾಳಾಗುತ್ತದೆಯೆಂದು ನಾನೇ ತಂಗಳು ತಿನ್ನುತ್ತೇನೆ. ಅದಕ್ಕೂ ಗಂಡನಿಂದ ಬಯ್ಗುಳ ತಪ್ಪುವುದಿಲ್ಲ. ಇವೆಲ್ಲವನ್ನೂ ಹೇಗೋ ಸಹಿಸಬಹುದು. ಆದರೆ ನನ್ನ ಗಂಡನ ನಡವಳಿಕೆಯೇ ನನಗೆ ಅರ್ಥವಾಗುತ್ತಿಲ್ಲ. ಎಲ್ಲರಂತೆ ನನಗೂ ಹೆಂಡತಿಯ ಸ್ಥಾನ ಕೊಟ್ಟು ನಗುನಗುತ್ತಾ ಮಾತಾಡಿಕೊಂಡಿರಲಿ ಎಂದು ನಾನು ಆಸೆ ಪಡುವುದೆ ತಪ್ಪೇ? ಅವರ ನೆಂಟರಿಷ್ಟರ ಮನೆಗೆ ನನ್ನನ್ನೂ ಕರೆದುಕೊಂಡು ಹೋಗಲಿ ಎಂದು ಬಯಸುವುದು ತಪ್ಪೇ? ಮನೆಯವರೆಲ್ಲಾ ಒಟ್ಟಿಗೇ ಕೂತುಕೊಂಡು ಮುಂದಿನ ಹಬ್ಬಹರಿದಿನಗಳನ್ನು ಆಚರಿಸುವ ಬಗ್ಗೆ ಮಾತಾಡುತ್ತಾ ತೀರ್ಮಾನ ತೆಗೆದುಕೊಳ್ಳೋಣ ಎಂದು ಹೇಳಿದರೆ ತಪ್ಪೇ? ನನ್ನ ಮಕ್ಕಳು ನನ್ನನ್ನು ಅಮ್ಮಾ ಎನ್ನದಿದ್ದರೂ ಅಭಿಮಾನದಿಂದ ಚಿಕ್ಕಮ್ಮಾ ಎಂದಾದರೂ ಕರೆಯಲಿ ಎಂದು ಬಯಸುವುದು ತಪ್ಪೇ? ನನ್ನ ಗಂಡನ ದೃಷ್ಟಿಯಲ್ಲಿ ಇವೆಲ್ಲವೂ ತಪ್ಪಂತೆ ಮೇಡಂ.
ನಾನು ವಿಪರೀತ ನಿರೀಕ್ಷೆ ಮಾಡುತ್ತೇನಂತೆ. ನನ್ನದು ಆಸೆಬುರುಕತನವಂತೆ. ಇದನ್ನು ಒಪ್ಪುವುದು ಹೇಗೆ ನೀವೇ ಹೇಳಿ. ಅವರು ನನ್ನೊಂದಿಗೆ ಸರಿಯಾಗಿ ನಡೆದುಕೊಳ್ಳಲು ನಾನೇ ಹೇಗೆ ಬದಲಾಗಬೇಕು ತಿಳಿಸಿ.
ಉತ್ತರ: ನಿಮ್ಮನ್ನು ಅಭಿನಂದಿಸುತ್ತೇನೆ. ನಿಮ್ಮಂಥವರು ನಿಜಕ್ಕೂ ಅಪರೂಪ. ’ ನಾನೇ ಬದಲಾಗುತ್ತೇನೆ ’ ಎಂದು ನೀವು ಬರೆದಿರುವುದೇ ನಿಮ್ಮ ಒಳ್ಳೆಯ ಗುಣವನ್ನು ತಿಳಿಸುತ್ತದೆ. ನಿಮ್ಮ ನಾಲ್ಕು ಪುಟಗಳ ಪತ್ರದ ವಿಷಯವನ್ನು ಓದಿದರೆ ನಿಮ್ಮ ಗಂಡನ ಬಗ್ಗೆ ಅನೇಕ ಅನುಮಾನಗಳು ಹುಟ್ಟುತ್ತವೆ. ಅವರು ನಿಮ್ಮನ್ನು ಮದುವೆಯಾದ ಕಾರಣವೇ ಬೇರೆಯೆನಿಸುತ್ತದೆ.
ತಮಗೆ ಅಡುಗೆ ಮಾಡಿಹಾಕಲು, ತಮ್ಮ ಮನೆಯ ಎಲ್ಲಾ ಕೆಲಸಗಳನ್ನು ನಿಭಾಯಿಸಲು ಅವರಿಗೆ ಒಬ್ಬ ಹೆಣ್ಣಾಳಿನ ಅಗತ್ಯವಿತ್ತು. ಹೆಂಡತಿಯೆಂದು ನಾಲ್ಕು ಜನರ ಎದುರು ಮದುವೆಯಾಗಿಬಿಟ್ಟರೆ ಮನೆಯ ಕೆಲಸದ ಸಮಸ್ಯೆ ಬಗೆಹರಿಯುತ್ತದೆ. ಮತ್ತು ಎರಡು ಹೊತ್ತು ಊಟಹಾಕಿದರೆ ಮುಗಿಯಿತು, ಸಂಬಳ ಕೊಡುವ ಅಗತ್ಯವಿಲ್ಲವಲ್ಲ? ಅದೇ ಬೇರೆಯವರನ್ನು ಕೆಲಸಕ್ಕಿಟ್ಟುಕೊಂಡರೆ, ಅಡುಗೆಗೆ ಒಭ್ಭರು, ಕಸಮುಸುರೆಗೆ ಒಬ್ಬರು ಬೇಕು. ಮತ್ತು ಅವರಿಗೆ ಸಂಬಳವಲ್ಲದೇ ತಿಂಡಿ ಊಟಗಳನ್ನೂ ಕೊಡಬೇಕಲ್ಲ? ನಿಮ್ಮ ಮದುವೆಯಾದಾಗಿನಿಂದ ಅವರು ನಿಮ್ಮನ್ನು ನಡೆಸಿಕೊಂಡಿರುವ ರೀತಿ ಓದಿದರೆ, ಅವರು ನಿಮ್ಮನ್ನು ತಮ್ಮ ಅರ್ಧಾಂಗಿಯೆಂದು ಪರಿಗಣಿಸಿಯೇ ಇಲ್ಲವೆನಿಸುತ್ತದೆ. ಅದಕ್ಕೇ ಕೆಲಸದವರನ್ನು ಕಡೆಗಣಿಸುವ ಹಾಗೆ ನಿಮ್ಮೊಡನೆ ನಡೆದುಕೊಳ್ಳುತ್ತಿದ್ದಾರೆ. ನೀವು ಇದನ್ನು ಪ್ರಶ್ನಿಸಿದರೆ ಕೋಪದಿಂದ ಬಯ್ದು ನಿಮ್ಮ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಇದು ನಿಜಕ್ಕೂ ಹೀನ ನಡವಳಿಕೆ.
ಇದೂ ಒಂದು ರೀತಿಯಲ್ಲಿ ಮೋಸವೇ. ’ ಮದುವೆಯಾಗಿ ಹೆಂಡತಿಯನ್ನು ಕಡೆಗಣೀಸಿದರೆ, ಕೆಟ್ಟದಾಗಿ ಬಯ್ಯುತ್ತಾ ಮಾನಸಿಕ ಹಿಂಸೆ ಕೊಟ್ಟರೆ ಅದು ಅಪರಾಧ ’ವೆಂದೇ ಸುಪ್ರೀಂ ಕೋರ್ಟು ಹೇಳಿದೆ. ನಿಮ್ಮ ಗಂಡ ಅಪರಾಧ ಮಾಡುತ್ತಿದ್ದಾರೆ. ನಿಮ್ಮ ಅಣ್ಣ ನಿಮಗೆ ಸಹಾಯ ಮಾಡಿದರೆ ನೀವು ಕಾನೂನಿನ ಮೊರೆಹೊಕ್ಕು ಈ ಸಮಸ್ಯೆಯನ್ನು ನ್ಯಾಯವಾಗಿ ಪರಿಹರಿಸಿಕೊಳ್ಳಬಹುದು. ಆದರೆ ಇದಕ್ಕೆ ಹಣಬಲ ಮತ್ತು ಜನಬಲ ಎರಡು ಬೇಕು. ವಯಸ್ಸಾದ ನಿಮಗೆ ಹೇಗೋ ಒಂದು ಗಂಡು ಸಿಕ್ಕಿದೆಯಲ್ಲ ಎನ್ನುವ ಉತ್ಸಾಹದಲ್ಲಿ ಆ ಗಂಡಿನ ಪೂರ್ವಾಪರಗಳನ್ನು ಸರಿಯಾಗಿ ವಿಚಾರಿಸದೇ ನಿಮ್ಮಣ್ಣ ಆತುರದಲ್ಲಿ ಮದುವೆ ಮಾಡಿದಂತಿದೆ. ಪಾಪ ಏನೂ ತಪ್ಪು ಮಾಡದ ನೀವು ಇದಕ್ಕೆ ಕೇವಲ ಬಲಿಪಶುವಾದಿರಿ.
ಇನ್ನೊಂದು ಮಾರ್ಗವೂ ಇದೆ. ಇದಕ್ಕೆ ನಿಮ್ಮ ಸಹನೆ ಬೇಕು ಅಷ್ಟೆ. ಹೇಗೂ ನೀವು ನಾನೇ ಬದಲಾಗುತ್ತೇನೆ ಎಂದು ಬರೆದಿದ್ದೀರಿ. ಆದ್ದರಿಂದಲೇ ಈ ಮಾರ್ಗವನ್ನು ಹೇಳುತ್ತಿದ್ದೇನೆ. ಕಷ್ಟವಿದೆ ಹೌದು. ಆದರೆ ಒಳ್ಳೆಯ ಫಲಿತಾಂಶವೂ ಬರಬಹುದು. ನಿಮ್ಮ ಈಗಿನ ಚಿಂತನ ಕ್ರಮವನ್ನೇ ಬದಲಾಯಿಸಿಕೊಳ್ಳುವುದು. ಅದು ಹೇಗೆಂದು ಹಲವು ಅಂಶಗಳನ್ನು ತಿಳಿಸುತ್ತಾ ವಿವರಿಸುತ್ತೇನೆ. ೧ ನಾಲ್ಕುಜನರ ಮುಂದೆ ಅವರು ತಾಳಿಕಟ್ಟಿ ಮದುವೆಯಾಗಿರುವುದರಿಂದ ನಿಮಗೆ ಗೃಹಿಣಿಯ ಸ್ಥಾನ ಸಿಕ್ಕಿದೆ. ೨ ಸಮಾಜದಲ್ಲಿ ಮದುವೆಯಾದ ಮಹಿಳೆಯರಿಗೆ ಸಿಕ್ಕುವ ಗೌರವ ಈಗ ನಿಮಗಿದೆ. ೩ ಈಗ ನೀವು ನಿಮ್ಮದೇ ಮನೆಯಲ್ಲಿ ವಾಸವಿದ್ದೀರಿ. ಅದು ಬಾಡಿಗೆಯದಿರಲಿ, ಚೆನ್ನಾಗಿರಲಿ, ಇಲ್ಲದಿರಲಿ, ನೀವಿರುವ ಮನೆಯ ಗೃಹಿಣಿ ನೀವು. ೪ ನಿಮ್ಮಣ್ಣನ ಮನೆಯಲ್ಲಿ ನೀವೀಗ ಮಾಡುತ್ತಿರುವಷ್ಟೇ ಕೆಲಸವನ್ನು ಮಾಡಿದರೂ ಅವರು ಹಾಕುತ್ತಿದ್ದ ಊಟ ’ ಋಣದ ಊಟ ’ ವಾಗಿತ್ತು. ೫ ಈಗ ನೀವು ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದೀರಿ ಮತ್ತು ಅಲ್ಲಿ ಸಿಗುವ ಊಟ ನಿಮ್ಮ ಹಕ್ಕಿನದು ೬ ಈ ಎಲ್ಲ ಕಾರಣಗಳಿಂದ ನಿಮಗೆ ಒಂದು ಸುಸ್ಥಿತಿ ಸಿಕ್ಕಿದೆಯೆಂದು ಭಾವಿಸಿಕೊಳ್ಳಿ.
ಇನ್ನು ನೀವು ನಿಮ್ಮದೇ ಪರಿಧಿಯಲ್ಲಿ, ನಿಮಗಿರುವ ಸ್ವತಂತ್ರದಲ್ಲಿ ನಿಮ್ಮ ಮನಸ್ಸಿಗೆ ಸ್ವಲ್ಪವಾದರೂ ಸುಖಕೊಡುವಂಥಾ ಕೆಲಸಗಳನ್ನು ಮಾಡಬಹುದು. ೧ ಒಳ್ಳೆಯ ಪುಸ್ತಕಗಳನ್ನು ಮನೆಗೆಲಸವೆಲ್ಲಾ ಮುಗಿದ ಮೇಲೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ೨ ಮನೆಯ ಮುಂದೆ ಜಾಗವಿದ್ದರೆ, ಅಥವಾ ಪಾಟುಗಳಿದ್ದರೆ, ಒಂದಿಷ್ಟು ಗಿಡಗಳನ್ನು ಬೆಳೆಸುವ ಹವ್ಯಾಸ ಮನಸ್ಸಿಗೆ ಮುದಕೊಡುತ್ತದೆ. ೩ ಅಕ್ಕಪಕ್ಕದ ಮಹಿಳೆಯರ ಜೊತೆ ಒಂದಿಷ್ಟು ಸ್ನೇಹವನ್ನು ಬೆಳೆಸಿಕೊಂಡು ಒಬ್ಬರಿಗೊಬ್ಬರು ದಿನನಿತ್ಯದ ಕೆಲಸಕ್ಕೆ ನೆರವಾದರೆ ಖುಷಿ ಸಿಗುತ್ತದೆ. ೪ ಬಿಡುವಾದಾಗ ಸಂಗೀತ ಕೇಳುವುದು, ಹರಿದಾಸರ ಕೀರ್ತನೆಗಳನ್ನು ವಚನಕಾರರ ವಚನಗಳನ್ನು, ಜನಪದಹಾಡುಗಳನ್ನು ಭಾವಗೀತೆಗಳನ್ನು ಹಾಡಿಕೊಳ್ಳುವುದು ಸಹ ಮನಸ್ಸಿಗೆ ಮುದವನ್ನು ಕೊಡುತ್ತದೆ. ೫ ಹತ್ತಿರದಲ್ಲಿ ದೇವಸ್ಥಾನವಿದ್ದರೆ, ಪ್ರತಿನಿತ್ಯ ಅಲ್ಲಿ ಹೂಬತ್ತಿ ಮಾಡಿಕೊಡುವ, ಹೂವನ್ನು ಕಟ್ಟಿಕೊಡುವ, ದೇವರ ಉಪಕರಣೆಗಳನ್ನು ತೊಳೆದುಕೊಡುವ, ಅಂಗಳಕ್ಕೆ ನೀರುಹಾಕಿ ರಂಗೋಲಿಹಾಕುವ ಸೇವೆಗಳನ್ನು ಮಾಡಿದರೆ ಮನಸ್ಸಿಗೆ ಅಹ್ಲಾದವೆನಿಸುತ್ತದೆ.
ಒಂದೆರಡು ಸತ್ಯಗಳನ್ನು ನೀವು ಮನನ ಮಾಡಿಕೊಳ್ಳಬೇಕು. ನಿಮಗೀಗ ಐವತ್ತು ವರ್ಷವೆಂದು ಬರೆದಿದ್ದೀರಿ. ಅಂದರೆ ನಿಮ್ಮ ಗಂಡನಿಗೆ ಐವತ್ತೈದರಿಂದ ಅರವತ್ತು ವರ್ಷವಿರಬಹುದು. ಅವರು ಸರಿಯಾದ ವಯಸ್ಸಿಗೆ ಮದುವೆಯಾಗಿ ಮಕ್ಕಳಾಗಿ ದಾಂಪತ್ಯದ ಎಲ್ಲ ಮಜಲುಗಳನ್ನು ದಾಟಿದ್ದಾರೆ. ನಿಮಗೆ ಮಾತ್ರ ಈ ಮದುವೆಯೆನ್ನುವುದು ಹೊಸದರ ಹಾಗೆ ಕಾಣುತ್ತಿದೆ. ಇದರ ಮತ್ತೊಂದು ಮುಖವನ್ನೂ ನೀವು ಗಮನಿಸ ಬೇಕಲ್ಲವೇ? ಯುವಕಯುವತಿಯರು ಮದುವೆಯಾದರೆ, ಗಂಟೆಗಟ್ಟಲೆ ಮಾತು, ಓಡಾಟ, ಈ ಎಲ್ಲಾ ಸಡಗರಗಳು ಸಹಜ. ಆದರೆ ವೃದ್ಧಾಪ್ಯದ ದಾಂಪತ್ಯದಲ್ಲಿ ಕೇವಲ ಒಬ್ಬರ ಅಗತ್ಯಕ್ಕೆ ಒಬ್ಬರು ಮಾತಿಲ್ಲದೇ ಒದಗುತ್ತಿರುತ್ತಾರೆ ಅಷ್ಟೆ. ಈ ವಯಸ್ಸಿಗೆ ಮಾತಿನ ಕೆಲಸ ಮುಗಿದು ಹೋಗಿರುತ್ತದೆ. ಈ ಸತ್ಯವನ್ನು ನೀವು ಅರಿಯಬೇಕು. ಇನ್ನೊಂದು ನಿಮ್ಮ ಮಲಮಕ್ಕಳದು. ಅವರು ಈಗಾಗಲೇ ಬೆಳೆದು ಯುವಕರಾಗಿದ್ದಾರೆ. ಅವರ ಪ್ರಪಂಚವೇ ಬೇರೆಯಾಗಿರುತ್ತದೆ. ಅಲ್ಲದೇ ಅವರಪ್ಪ ಹೀಗೆ ಮದುವೆಯಾಗಿರುವುದು ಅವರಿಗೆ ಇಷ್ಟವೇ ಇಲ್ಲದೆಯೂ ಇರಬಹುದು. ಅಪ್ಪನ ದಾಕ್ಷಿಣ್ಯಕ್ಕೆ ಸುಮ್ಮನಿರಬಹುದು. ಪುಟ್ಟ ಮಕ್ಕಳಾದರೆ ಯಾರು ಹಾಲು ಕುಡಿಸಿದರೂ ಅವರನ್ನೇ ಅಮ್ಮನೆಂದು ಭಾವಿಸಬಹುದು. ಆದರೆ ಬೆಳೆದ ಮಕ್ಕಳಿಗೆ ಯಾರೆಂದರೆ ಅವರನ್ನು ತಮ್ಮಮ್ಮನ ಸ್ಥಾನದಲ್ಲಿ ಕಲ್ಪಿಸಿಕೊಳ್ಳುವುದು ಕಷ್ಟವಲ್ಲವೇ? ಅವರು ನಿಮ್ಮನ್ನು ಅವಮಾನ ಮಾಡದೇ ಸಹಿಸಿಕೊಂಡಿದ್ದಾರಲ್ಲ? ಅದಕ್ಕೆ ಸಂತೋಷ ಪಡಿ.
ಡಾ.ಶಾಂತಾ ನಾಗರಾಜ್ ಅವರ ಇನ್ನಷ್ಟು ಸಲಹೆಗಳಿಗೆ ಕ್ಲಿಕ್ಕಿಸಿ: