

ನವದೆಹಲಿ : ಭಾರತದ ವಿಕೆಟ್ಕೀಪರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ಗೆ ಹರಿಯಾಣದ ಮಾಜಿ ಕ್ರಿಕೆಟಿಗ ಮೃಣಾಕ್ ಸಿಂಗ್, 1.63 ಕೋಟಿಗೂ ಅಧಿಕ ಹಣವನ್ನು ವಂಚನೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಮೃಣಾಕ್ ಸಿಂಗ್ 1 ಕೋಟಿ 63 ಲಕ್ಷ ಚೆಕ್ ಬೌನ್ಸ್ ಮಾಡುವ ಮೂಲಕ ರಿಷಭ್ ಪಂತ್ಗೆ ವಂಚಿಸಿದ್ದಾರೆ ಎನ್ನಲಾಗಿದೆ. ಮೃಣಾಕ್ ಸಿಂಗ್ ವಿರುದ್ಧ ಇರುವ ಬೇರೊಂದು ಆರೋಪದ ವಿಚಾರಣೆ ವೇಳೆ ಈ ಅಂಶವೀಗ ಬೆಳಕಿಗೆ ಬಂದಿದೆ. ಈ ಕುರಿತಂತೆ ರಿಷಭ್ ಅವರು ಮ್ಯಾನೇಜರ್ ಪುನೀತ್ ಸೋಲಂಕಿ ದೂರು ಕೂಡ ದಾಖಲು ಮಾಡಿದ್ದರು ಎಂಬ ಅಂಶ ತಿಳಿದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮೃಣಾಕ್ ಸಿಂಗ್ 1 ಕೋಟಿ 63 ಲಕ್ಷ ಚೆಕ್ ಬೌನ್ಸ್ ಮಾಡುವ ಮೂಲಕ ರಿಷಭ್ ಅವರಿಗೆ ವಂಚಿಸಿದ್ದಾರೆ ಎಂದು ಮ್ಯಾನೇಜರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ಹೇಗೆ ಬೆಳಕಿಗೆ ಬಂತು?
ಮೃಣಾಕ್ ಉದ್ಯಮಿಯೊಬ್ಬರಿಗೆ ಮೋಸ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಅಗ್ಗದ ದರದಲ್ಲಿ ದುಬಾರಿ ವಾಚ್ ಮತ್ತು ಮೊಬೈಲ್ ಫೋನ್ಗಳನ್ನು ಕೊಡಿಸುವುದಾಗಿ ಹೇಳಿ ವಂಚಿಸಿರುವ ಆರೋಪವಿದೆ. ಆರು ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿ ಅವರ ವಿರುದ್ಧ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದರ ವಿಚಾರಣೆ ವೇಳೆ ರಿಷಭ್ ಅವರಿಗೆ ಆಗಿರುವ ವಂಚನೆ ಪ್ರಕರಣ ಕೂಡ ಬೆಳಕಿಗೆ ಬಂದಿದೆ. ಮೃಣಾಕ್ ಸಿಂಗ್ ತಾನು, ಐಷಾರಾಮಿ ವಾಚ್ಗಳು, ಬ್ಯಾಗ್ಗಳು, ಆಭರಣಗಳು ಇತ್ಯಾದಿಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರವನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ರಿಷಭ್ ಅವರು ಫ್ರಾಂಕ್ ಮುಲ್ಲರ್ ವ್ಯಾನ್ಗಾರ್ಡ್ ಯಾಟಿಂಗ್ ಸಿರೀಸ್ನಿಂದ ವಾಚ್ ಖರೀದಿಸಲು ಇಚ್ಛೆ ಪಟ್ಟಿದ್ದರು. ಅದನ್ನು ತಾನು ಕೊಡಿಸುವುದಾಗಿ ಮೃಣಾಕ್ ಸಿಂಗ್ ಹೇಳಿ, ರಿಷಭ್ ಅವರಿಂದ 36,25,120 ರೂ. ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ಇನ್ನೊಂದು ವಾಚ್ಗಾಗಿ 62,60,000 ರೂ. ಪಡೆದುಕೊಂಡಿದ್ದರು. ಈ ರೀತಿಯಾಗಿ ರಿಷಭ್ ಅವರ ಜತೆಗೆ ತಮಗೂ ವಂಚಿಸಿದ್ದಾರೆ ಎಂದು ಸೋಲಂಕಿ ದೂರಿನಲ್ಲಿ ದಾಖಲು ಮಾಡಿರುವುದು ಬಹಿರಂಗಗೊಂಡಿದೆ.