ಮಗು ಗರ್ಭದಲ್ಲಿದ್ದಾಗಲೇ ಮತ್ತೊಮ್ಮೆ ಗರ್ಭ ಧರಿಸಿದ ಮಹಿಳೆ- ನಂಬಲು ಆಗ್ತಿಲ್ವಾ? ಈ ಘಟನೆ ಓದಿ..

twins
Published on

ಲಂಡನ್​: ವೈದ್ಯಕೀಯ ಕ್ಷೇತ್ರದಲ್ಲಿ ಯಾರೂ ನಂಬದ ಕೆಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ವೈದ್ಯರನ್ನೂ ಅಚ್ಚರಿಗೊಳಿಸುವ, ವೈದ್ಯಕೀಯ ರಂಗಕ್ಕೇ ಸವಾಲು ಎನಿಸುವ ಅಪರೂಪದ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ.

ಅಂಥದ್ದೇ ಒಂದು ಅಚ್ಚರಿ ಎನಿಸುವ ಘಟನೆ ಲಂಡನ್​ನಲ್ಲಿ ನಡೆದಿದೆ. ಆಗಿದ್ದೇನೆಂದರೆ ಒಬ್ಬ ಮಹಿಳೆ ಗರ್ಭಿಣಿಯಿರುವಾಗಲೇ ಮತ್ತೊಂದು ಮಗುವಿಗೆ ಗರ್ಭ ಧರಿಸುವ ವಿಚಿತ್ರ ಹಾಗೂ ಕುತೂಹಲದ ಘಟನೆ ಇದಾಗಿದೆ. ಮೂರು ತಿಂಗಳು ಗರ್ಭಿಣಿ ಇದ್ದ ಮಹಿಳೆಯೊಬ್ಬರು ನಂತರ ಮತ್ತೊಮ್ಮೆ ಗರ್ಭ ಧರಿಸಿ ನಂತರ ಒಟ್ಟಿಗೇ ಸೂಪರ್​ ಅವಳಿ- ಜವಳಿ ಮಕ್ಕಳನ್ನು ಹೆತ್ತಿದ್ದಾರೆ.

ರೆಬಕಾ ರಾಬರ್ಟ್ಸ್, ರೈಸ್ ವೀವರ್ ದಂಪತಿ ಇಂಥದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ. ಈ ದಂಪತಿ ಮದುವೆಯಾಗಿ ಹಲವು ವರ್ಷಗಳಾಗಿದ್ದರೂ ಮಕ್ಕಳು ಆಗಿರಲಿಲ್ಲ. ನಂತರ ಅವರಿಗೆ ಫರ್ಟಿಲಿಟಿ ಮೆಡಿಕೇಷನ್​ ಚಿಕಿತ್ಸೆ ನೀಡಲಾಯಿತು. ಈ ಚಿಕಿತ್ಸೆ ಬಳಿಕ ರೆಬಕಾ ಗರ್ಭಿಣಿಯಾದರು. ಈ ದಂಪತಿಯ ಖುಷಿಗೆ ಪಾರವೇ ಇರಲಿಲ್ಲ.

ಮೇಲಿಂದ ಮೇಲೆ ಆಸ್ಪತ್ರೆಗೆ ತಪಾಸಣೆಗೆಂದು ಇವರು ಹೋಗುತ್ತಿದ್ದರು. 12 ವಾರಗಳ ಗರ್ಭಿಣಿಯಾದಾಗ ಅಂದರೆ ಮೂರು ತಿಂಗಳಾದಾಗ ವೈದ್ಯರು ಈಕೆಗೆ ಅಲ್ಟ್ರಾಸೌಂಡ್ ಮೂಲಕ ತಪಾಸಣೆ ಮಾಡುತ್ತಿದ್ದರು. ಆಗಲೇ ಅವರಿಗೂ ಅಚ್ಚರಿ ಎನಿಸುವ ಘಟನೆ ನಡೆದಿರುವುದು ತಿಳಿಯಿತು. ಹೊಟ್ಟೆಯಲ್ಲಿ ಮತ್ತೊಂದು ಮಗು ಬೆಳೆಯುತ್ತಿರುವುದು ಕಂಡಿತು.

ಅವರು ಮತ್ತೊಮ್ಮೆ ತಪಾಸಣೆ ಮಾಡಿದಾಗ ಗರ್ಭದಲ್ಲಿ ಎರಡು ಮಕ್ಕಳು ಇರುವುದು ಕಂಡಿದೆ. ಆದರೆ ಇನ್ನೊಂದು ಮಗು ಮೊದಲ ಮಗುವಿಗಿಂತ ಒಂದು ತಿಂಗಳ ಬಳಿಕ ಗರ್ಭದಲ್ಲಿ ಬೆಳವಣಿಗೆ ಹೊಂದಿರುವುದು ತಿಳಿದುಬಂದಿದೆ. ವೈದ್ಯರಿಗೂ ಕೂಡ ಇದು ಮೊದಲೇ ತಿಳಿದಿಲ್ಲ. ಅವರು ಕೂಡ ತುಂಬಾ ಅಚ್ಚರಿಪಟ್ಟುಕೊಂಡಿದ್ದಾರೆ. ನನಗೆ ಮೂರು ತಿಂಗಳು ಆದಾಗ ಇನ್ನೊಂದು ಮಗು ಗರ್ಭದಲ್ಲಿ ಇರುವುದು ವೈದ್ಯರಿಗೆ ತಿಳಿದಿದೆ. ಆದರೆ ಎರಡನೆಯ ಮಗುವಿಗೆ ಮತ್ತು ಮೊದಲ ಮಗುವಿಗೆ ಒಂದು ತಿಂಗಳ ಅಂತರ ಇರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ರೆಬಕಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇವರಿಗೆ ಚಿಕಿತ್ಸೆ ನೀಡುತ್ತಿರುವ ಡೇವಿಡ್ ವಾಕರ್ ಅವರು ಹೇಳುವಂತೆ, 'ಇದು ಅಪರೂಪದ ಘಟನೆ. ಈ ಗರ್ಭಾವಸ್ಥೆಯನ್ನು ಸೂಪರ್ ಫೆಟೇಷನ್ ಎಂದು ವೈದ್ಯಕೀಯ ಭಾಷೆಯಲ್ಲಿ ಹೇಳಲಾಗುತ್ತದೆ. ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಅಂಡಾಶಯದಿಂದ ಅಂಡಾಣುಗಳು ಬಿಡುಗಡೆಯಾದ ನಂತರ ಇದು ಸಂಭವಿಸುತ್ತದೆ ಎಂದಿದ್ದಾರೆ.

ಒಂದು ಮಗುವನ್ನು ಬದುಕಿಸಬಹುದು. ಇನ್ನೊಂದು ಮಗು ಬದುಕುಳಿಯುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಆದರೆ ಇಬ್ಬರೂ ಮಕ್ಕಳಿಗೆ ರೆಬಕಾ ಜನ್ಮ ನೀಡಿದ್ದು, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮಕ್ಕಳಿಗೆ ನೊವಾ ಮತ್ತು ರೋಸಾಲಿ ಎಂಬ ಹೆಸರು ಇಟ್ಟಿದ್ದಾರೆ. ಎರಡನೆಯ ಮಗಳು ರೊಸಾಲಿಯನ್ನು ಸದ್ಯ 95 ದಿನಗಳವರೆಗೆ ನವ-ಪ್ರಸವ ತೀವ್ರ ನಿಗಾ ಘಟಕದಲ್ಲಿ (NICU) ಇರಿಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net