

ಬೆಂಗಳೂರು: ಕರೊನಾ ಹೊಸ ರೂಪದಲ್ಲಿ ಇದಾಗಲೇ ಎಲ್ಲೆಡೆ ತನ್ನ ಆರ್ಭಟ ಮುಂದುವರೆಸಿದೆ. ಕ್ಷಣ ಕ್ಷಣಕ್ಕೂ ಜನರಲ್ಲಿ ಆತಂಕ ಸೃಷ್ಟಿಸಿರುವ ಈ ಕರೊನಾದಿಂದಾಗಿ ಮತ್ತೆ ಶಾಲೆಗಳು ಮುಚ್ಚುವ ಪರಿಸ್ಥಿತಿ ತಲೆದೋರಿದೆ.
ಈಗಷ್ಟೇ ರಾಜ್ಯಾದ್ಯಂತ ಶಾಲೆಗಳು ತೆರೆದಿದ್ದು, ನಿಧಾನವಾಗಿ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದರು. ಆದರೆ ಇದೀಗ ಕರೊನಾ ಮತ್ತಷ್ಟು ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವೇ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯವಾಗಿದೆ.
ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. 6 ರಿಂದ 9ನೇ ತರಗತಿಯವರೆಗೆ ಈಗಾಗಲೇ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಪುನಃ ಕ್ಲೋಸ್ ಮಾಡಲು ಸರ್ಕಾರ ತೀರ್ಮಾನಿಸಿರುವುದಾಗಿ ಸಚಿವರು ಹೇಳಿದ್ದಾರೆ. ಆದರೆ ಸದ್ಯ ಈ ನಿರ್ಧಾರ ಬೆಂಗಳೂರಿಗೆ ಮಾತ್ರ ಸೀಮಿತವಾಗಲಿದೆ. ಇದರ ಅರ್ಥ 9ನೇ ತರಗತಿಯವರೆಗೆ ಶಾಲೆಗಳನ್ನು ಬೆಂಗಳೂರಿನಲ್ಲಿ ಮಾತ್ರ ಮುಚ್ಚಲು ಸರ್ಕಾರ ತೀರ್ಮಾನಿಸಿದೆ. ಇದು ಮುಂದಿನ 15 ದಿನಗಳವರೆಗೆ ಇರಲಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕರೊನಾ ಆರ್ಭಟ ಹೆಚ್ಚಿರುವ ಹಿನ್ನೆಲೆಯಲ್ಲಿ ಇಲ್ಲಿ ಸದ್ಯ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಈ ವಯೋಮಾನದ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ 15 ದಿನಗಳವರೆಗೆ ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ 15 ದಿನಗಳವರೆಗೆ ಬೆಂಗಳೂರಿನಲ್ಲಿ ಶಾಲೆಗಳನ್ನು ಮುಚ್ಚಬೇಕಿದೆ ಎಂದರು.
10 ನೇ ತರಗತಿಗಳು ಎಂದಿನಂತೆ ಮುಂದುವರೆಯಲಿದೆ ಎಂದಿರುವ ಸಚಿವರು, ಈ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಕ್ಕಳ ಆರೋಗ್ಯದ ರಕ್ಷಣೆ ಮುಖ್ಯ. ಆದ್ದರಿಂದ ಬೆಂಗಳೂರಿನ ಶಾಲೆಗಳು 10ನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ ಎಂದಿದ್ದಾರೆ.