ಬೀ ಕೇರ್​ಫುಲ್​: ಮಾಸ್ಕ್​ ಮೇಲೀಗ ಹದ್ದಿನ ಕಣ್ಣು- ಮಾರ್ಷಲ್​ಗಳಿಗೆ ನೀಡಲಾಗಿದೆ ಟಾರ್ಗೆಟ್​!

mask1
Published on

ಬೆಂಗಳೂರು: ಕರೊನಾ ವೈರಸ್​ ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್​ ಕಡ್ಡಾಯ ಮಾಡಿರುವುದು ಹಳೆಯ ಸಂಗತಿ. ಅದೇ ರೀತಿ ಮಾಸ್ಕ್​ ಹಾಕಿಕೊಳ್ಳದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸಿದರೆ ದಂಡ ತೆರುವುದು ಎಲ್ಲರಿಗೂ ತಿಳಿದದ್ದೇ.

ಇದೀಗ ಹೊಸ ವಿಷಯವೊಂದು ಬಹಿರಂಗಗೊಂಡಿದೆ. ಅದೇನೆಂದರೆ, ಪ್ರತಿದಿನವೂ ಕನಿಷ್ಠ 20 ಮಂದಿಗೆ ದಂಡ ಹಾಕಲೇಬೇಕು ಎಂಬ ಕಟ್ಟುನಿಟ್ಟಿನ ನಿಯಮವನ್ನು ಪ್ರತಿಯೊಬ್ಬ ಬಿಬಿಎಂಪಿ ಮಾರ್ಷಲ್​ಗಳಿಗೆ ಟಾರ್ಗೆಟ್​ ನೀಡಲಾಗಿದೆ. ಸಾಮಾಜಿಕ ಅಂತರ ಕಾಪಾಡದವರಿಂದ 250 ರೂ. ದಂಡ ವಸೂಲಿ ಮಾಡಬೇಕು. ಟಾರ್ಗೆಟ್ ರೀಚ್ ಆಗ್ಲಿಲ್ಲ ಅಂದ್ರೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಆದ್ದರಿಂದ ಪ್ರತಿಯೊಬ್ಬ ಮಾರ್ಷಲ್​ಗಳೂ ಈ ಟಾರ್ಗೆಟ್​ ರೀಚ್​ ಮಾಡಲು ಎಲ್ಲರ ಮೇಲೆ ಹದ್ದಿನ ಕಣ್ಣು ಇಡುವುದು ಅನಿವಾರ್ಯ ಆಗಿದೆ. ದೂರದಲ್ಲಿ ಪೊಲೀಸರು ಇರುವುದನ್ನು ಕಂಡು ಹೇಗೋ ತಪ್ಪಿಸಿಕೊಂಡು ಹೋಗಬಹುದು ಎಂದು ಅಂದುಕೊಂಡು ಆರಾಮಾಗಿ ಇರುವವರೂ ಇನ್ನುಮುಂದೆ ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ.

ನಿಯಮ ಉಲ್ಲಂಘಿಸಿ ಹಾಗೂ ಹೀಗೂ ತಪ್ಪಿಸಿಕೊಂಡು ಹೋಗುವವರನ್ನು ನೋಡಿದರೂ ಹೋದರೆ ಹೋಗಲಿ ಬಿಡು ಎನ್ನುವ ಸ್ಥಿತಿ ಸದ್ಯ ಮಾರ್ಷಲ್​ಗಳಿಗೆ ಇಲ್ಲ.

ಆದ್ದರಿಂದಲೇ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಅವರ ಕಣ್ಣು ನೆಟ್ಟಿರುತ್ತದೆ ಎಂಬುದು ನೆನಪಿರಲಿ.

ಈ ನಿಯಮದ ಆದೇಶಕ್ಕೆ ಬಿಬಿಎಂಪಿ ದಕ್ಷಿಣ ವಲಯದ ಕಾರ್ಯದರ್ಶಿ ಮತ್ತು ವಲಯ ಸಂಯೋಜಕರಾದ ಮನೀಶ್ ಮೌದ್ಗಿಲ್ ಅವರು ಸಹಿ ಹಾಕಿದ್ದಾರೆ.

ಮಾಸ್ಕ್ ಧರಿಸದಿದ್ದರೆ ಹೇರಲಾಗುತ್ತಿದ್ದ 1000 ರೂಪಾಯಿಗಳ ದಂಡಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಚೇ ಬಿಬಿಎಂಪಿ ಈ ದಂಡದ ಪ್ರಮಾಣವನ್ನು 250 ರೂಗಳಿಗೆ ಇಳಿಕೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net