

ಚೆನ್ನೈ: ಚಿದಂಬರಂ ಕ್ಷೇತ್ರದ ಸಂಸದ, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕ ಥೋಲ್ ತಿರುಮಾವಾಲವನ್ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಹಾಗೂ ಕೆಲವು ಬಿಜೆಪಿ ಸದಸ್ಯರನ್ನು ತಮಿಳುನಾಡಿನ ಮುಟ್ಟುಕಾಡುದಲ್ಲಿ ಇಂದು ಬಂಧಿಸಲಾಗಿದೆ.
ಥೋಲ್ ತಿರುಮಾವಳವನ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂದು ಖಷ್ಬೂ ಟ್ವೀಟ್ ಮಾಡಿದ್ದಾರೆ. ಥೋಲ್ ತಿರುಮಾವಾಲವನ್ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ತಿರುಮಾವಾಲವನ್ ಅವರನ್ನು ಬೆಂಬಲಿಸಿದ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ರಾಜ್ಯ ಘಟಕ ಘೋಷಿಸಿತ್ತು.
ನನ್ನನ್ನು ಬಂಧಿಸಲಾಗಿದೆ. ಪೊಲೀಸ್ ವ್ಯಾನ್ನಲ್ಲಿ ಕರೆದೊಯ್ಯಲಾಗುತ್ತಿದೆ. ಮಹಿಳೆಯರ ಗೌರವಕ್ಕಾಗಿ ನಮ್ಮ ಕೊನೆ ಉಸಿರಿನವರೆಗೂ ಹೋರಾಡುತ್ತೇವೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುತ್ತಾರೆ. ನಾವು ಅವರ ಹಾದಿಯಲ್ಲಿ ಸಾಗುತ್ತಿದ್ದೇವೆ. ಕೆಲವು ಕೆಟ್ಟ ವ್ಯಕ್ತಿಗಳ ದೌರ್ಜನ್ಯಕ್ಕೆ ನಾವು ಮಂಡಿಯೂರುವುದಿಲ್ಲ. ಭಾರತ್ ಮಾತಾ ಕಿ ಜೈ' ಎಂದು ಟ್ವೀಟ್ನಲ್ಲಿ ಖಷ್ಬೂ ಉಲ್ಲೇಖಿಸಿದ್ದಾರೆ.
ನನ್ನ ಪ್ರಯಾಣಕ್ಕೆ ಅವಕಾಶ ನೀಡದೇ ಹಕ್ಕು ಕಸಿದುಕೊಳ್ಳಲಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲವೇ? ಹಕ್ಕನ್ನು ಕಸಿದುಕೊಳ್ಳಲಾಗಿದೆ. ಈ ಬಗ್ಗೆ ತಮಿಳುನಾಡು ಸಿಎಂ ಮತ್ತು ಎಐಎಡಿಎಂಕೆ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.
ಅತ್ತ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಟಿ ರಾಘವನ್ ಅವರನ್ನು ಮೇಲ್ಮರುವಥುರ್ ಸಮೀಪದ ಅಥುರ್ ಟೋಲ್ಗೇಟ್ನಲ್ಲಿ ಬಂಧಿಸಲಾಗಿದೆ.
ವಿಸಿಕೆ ಪಕ್ಷದ ವಿರುದ್ಧ ಹರಿಹಾಯ್ದಿರುವ ಖುಷ್ಬೂ, 'ಹೇಡಿ ವಿಸಿಕೆ. ಖುಷಿ ಪಡಬೇಡಿ. ಇದು ನಿಮ್ಮ ವೈಫಲ್ಯ. ನಾವು ಶಕ್ತಿಯುತರು ಎಂಬುದು ಗೊತ್ತಿರುವುದರಿಂದ ನಮ್ಮನ್ನು ಬಂಧಿಸಿದ್ದಾರೆ. ನಾವು ಮಂಡಿಯೂರುವುದಿಲ್ಲ. ಈ ಮಣ್ಣಿನ ಪ್ರತಿ ಹೆಣ್ಣುಮಗಳ ಗೌರವ ಕಾಪಾಡಲು ನರೇಂದ್ರ ಮೋದಿ ಅವರು ಪ್ರತಿ ಹೆಜ್ಜೆಯನ್ನೂ ತೆಗೆದುಕೊಳ್ಳುತ್ತಾರೆ. ಹೇಡಿ ವಿಸಿಕೆ, ಮಹಿಳೆಯನ್ನು ಗೌರವಿಸುವುದು ನಿಮಗೆ ಕಷ್ಟವಾಗುತ್ತಿದೆ' ಎಂದು ಕಿಡಿಕಾರಿದ್ದಾರೆ.