ಗಂಡು ಮಗು ಹುಟ್ಟಿದ ಖುಷಿಗೆ 'ಶಾಸ್ತ್ರ' ನೋಡಿ ಯುವಕನ ಬಲಿ ಕೊಟ್ಟ ಪಾತಕಿ: ಬೆಚ್ಚಿಬೀಳಿಸೋ ಘಟನೆ ಬಯಲಿಗೆ!

murder
Published on

ರೇವಾ (ಮಧ್ಯಪ್ರದೇಶ): ಇಚ್ಛೆಯನ್ನು ಪೂರೈಸುವಂತೆ ದೇವರಲ್ಲಿ ಹಲವಾರು ರೀತಿಯಲ್ಲಿ ಹರಕೆಯನ್ನು ಹೊರಲಾಗುತ್ತದೆ. ಕೋಳಿ, ಕುರಿಗಳನ್ನು ಬಲಿ ಕೊಡುವ ಘಟನೆಗಳು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ತನಗೆ ಗಂಡುಮಗು ಹುಟ್ಟಿದ ಖುಷಿಗೆ ವ್ಯಕ್ತಿಯೊಬ್ಬ ಯುವಕನ ಬಲಿ ಕೊಟ್ಟಿರುವ ಘಟನೆ ಇದಾಗಿದೆ.

ಇಂಥದ್ದೊಂದು ಘಟನೆ ನಡೆದಿರುವುದು ಮಧ್ಯಪ್ರದೇಶದ ರೇವಾ ಜಿಲ್ಲೆಯ ಬೇಧೋವಾ ಗ್ರಾಮದಲ್ಲಿ. ಇಲ್ಲಿಯ ನಿವಾಸಿ ರಾಮ್‌ಲಾಲ್‌ ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ಗಂಡುಮಗು ಹುಟ್ಟಬೇಕು ಎನ್ನುವ ತನ್ನ ಇಚ್ಛೆಯನ್ನು ದೇವಿ ಈಡೇರಿಸಿದ್ದಾಳೆ ಎನ್ನುವ ಕಾರಣಕ್ಕೆ 18 ವರ್ಷದ ಯುವಕನನ್ನು ಈತ ಬಲಿ ಕೊಟ್ಟಿದ್ದಾನೆ.

ರಾಮ್​ಲಾಲ್​ ದಂಪತಿಗೆ ಮೂವರು ಹೆಣ್ಣುಮಕ್ಕಳು. ಗಂಡುಮಗುವಿಗಾಗಿ ಹಾತೊರೆಯುತ್ತಿದ್ದ ಈತ ಗ್ರಾಮದ ದೇವಿಯ ಬಳಿ ಹರಕೆ ಹೊತ್ತುಕೊಂಡಿದ್ದನಂತೆ. ನಾಲ್ಕನೆಯ ಮಗು ಗಂಡಾಗಿ ಹುಟ್ಟಿತು. ಇದರಿಂದಾಗಿ ದೇವಿಯನ್ನು ಸಮಾಧಾನಪಡಿಸಲು ನರ ಬಲಿ ಕೊಡಲು ಹುಡುಕುತ್ತಿದ್ದ. ಆಗ ಆತನ ಕಣ್ಣಿಗೆ ಬಿದ್ದದ್ದು, ಮೇಕೆಗಳನ್ನು ಮೇಯಿಸುತ್ತಿದ್ದ 18 ವರ್ಷದ ಅಮಾಯಕ ಯುವಕ ದಿವ್ಯಾಂಶು.

ಆತನನ್ನು ಪುಸಲಾಯಿಸಿ ಕರೆದುಕೊಂಡು ಹೋಗಿರುವ ರಾಮ್​ಲಾಲ್​ ದೇವಿಗೆ ಆತನನ್ನು ಬಲಿ ಕೊಟ್ಟಿದ್ದಾನೆ. ದೇವಿಯ ವಿಗ್ರಹದ ಕೆಳಗಡೆಯೇ ಶವವನ್ನು ಹೂತು ಹಾಕಿ ಬಂದಿದ್ದಾನೆ. ಮೃತದೇಹವು ಗ್ರಾಮಸ್ಥರಿಗೆ ಕಾಣಿಸುತ್ತಲೇ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಬಂದು ಶವವನ್ನು ಹೊರಕ್ಕೆ ತೆಗೆದು ತನಿಖೆ ಕೈಗೊಂಡಾಗ ಈ ಕೃತ್ಯ ಬಯಲಿದೆ ಬಂದಿದೆ. ತಾನೇ ಕೊಲೆ ಮಾಡಿರುವುದು ಎಂದು ರಾಮ್​ಲಾಲ್​ ಒಪ್ಪಿಕೊಂಡಿದ್ದಾನೆ.

ಗಂಡು ಮಗು ಬೇಕೆಂದರೆ ಯುವಕನೊಬ್ಬನನ್ನು ಬಲಿಕೊಡಬೇಕೆಂದು ಶಾಸ್ತ್ರದಲ್ಲಿ ಹೇಳಿತ್ತು. ಅದರಂತೆ ತಾನು ನಡೆದುಕೊಂಡೆ ಎಂದಿದ್ದಾನೆ. ರಾಮಲಾಲ್ ಮಾಟಮಂತ್ರದಲ್ಲಿ ತೊಡಗಿದ್ದ ಎಂದು ಗ್ರಾಮಸ್ಥರು ಕೂಡ ಪೊಲೀಸರಿಗೆ ಮಾಹಿತಿ ನೀಡಿದ್ದು ಆತನನ್ನು ಬಂಧಿಸಲಾಗಿದೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net