

ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್‌ಪೀರಿಯನ್ಸ್…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ...
| ಸರಿತಾ ಮಧು, ಸಹ ಶಿಕ್ಷಕಿ, ನಾಗೇನಹಳ್ಳಿ, ತರೀಕೆರೆ
2019ರ ಏಪ್ರಿಲ್ನಲ್ಲಿ ಕಂಡ ಕನಸಿನರಮನೆ ಸಾಕಾರಗೊಳ್ಳಲು ಎರಡೂವರೆ ವರ್ಷ ಹಿಡಿಯಿತು. ಅಂದುಕೊಂಡ ರೀತಿಯಲ್ಲಿ ಯೋಜನೆ ಅನುಷ್ಠಾನಗೊಂಡರೂ ಕೆಲಸಗಾರರ ಉಪಟಳವೂ ಅಷ್ಟೇ ಇತ್ತು. ನಿಜಕ್ಕೂ ಯಾಕಾದರೂ ಮನೆ ಕಟ್ಟಲು ಆರಂಭಿಸಿದೆವೋ ಎಂದುಕೊಂಡಿದ್ದೂ ಉಂಟು.
ಅನೇಕ ವಿಘ್ನಗಳು ಎದುರಾದರೂ ಮತ್ತದೇ ಹುಮ್ಮಸ್ಸಿನಿಂದ ಸಾಗಿದೆವು. ಪಾಯ ಹಾಕುವ ಸಮಯದಲ್ಲಿ ಪಿಲ್ಲರ್ಗಳಿಗೆ ಕ್ಯೂರಿಂಗ್ ಮಾಡಬೇಕಾಗಿತ್ತು. ಒಂದು ದಿನ ನನ್ನ ಪತಿರಾಯರು ಅನ್ಯಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದರು. ನಾನು ಒಬ್ಬಳೇ ಮನೆಯಲ್ಲಿ ಇದ್ದುದರಿಂದ ಆ ಕೆಲಸ ನನ್ನ ಪಾಲಿಗೆ ಬಂತು. ಇನ್ನೇನು ಪಾಯದ ಮೇಲೆ ನಿಂತು ಪಿಲ್ಲರ್ಗಳಿಗೆ ಮೋಟರ್ ಸಹಾಯದಿಂದ ನೀರು ಹಿಡಿಯುತ್ತಿದ್ದೆ. ಗಮನ ನೀರಿನ ಕಡೆಗೆ ಮಾತ್ರ ಇತ್ತು. ಕೆಳಗೆ ನೋಡದೇ ಬಿದ್ದೇ ಬಿಟ್ಟೆ.
ಬಳೆಗಳೆಲ್ಲಾ ಚೂರಾಗಿ ಕೈಗೆ ಏಟು ಬಿತ್ತು. ಬಿದ್ದ ರಭಸಕ್ಕೆ ತಲೆ ತಿರುಗಿ ಕಣ್ಣುಕತ್ತಲೆ ಬಂತು. ಸಹಾಯಕ್ಕಾಗಿ ಕೂಗಲೂ ಆಗದ ಸ್ಥಿತಿ. ಅಲ್ಲೇ ನೀರು ಸುರಿಯುತ್ತಿದ್ದರೂ ಅದು ಕುಡಿಯುವಂತಿರಲಿಲ್ಲ, ಅದು ಶುಚಿಗೊಳಿಸದ ಸಂಪಿನಲ್ಲಿದ್ದ ಕೊಳಕು ನೀರು. ನನಗೋ ನೀರು ಬೇಕೇಬೇಕಿತ್ತು. ಯಾವುದನ್ನೂ ಲೆಕ್ಕಿಸದೆ ಕೈಯಲ್ಲಿದ್ದ ನೀರಿನ ಪೈಪನ್ನು ಬಾಯಿಗೆ ಹಿಡಿದು ಕುಡಿದೇಬಿಟ್ಟೆ! ಇದನ್ನು ಮನೆಯವರಿಗೆ ಹೇಳಿದಾಗ ಎಲ್ಲರೂ ನಕ್ಕರು. ಫಿಲ್ಟರ್ ವಾಟರೇ ಬೇಕು ಎಂದು ಹಂಬಲಿಸುವ ನನಗೆ ಅಂದು ಸಂಪಿನ ನೀರೇ ಜೀವಜಲವಾಗಿತ್ತು. ಈಗ ಅದೇ ಜಾಗದಲ್ಲಿ ಮನೆಯ ಮುಂಭಾಗದ ಮೆಟ್ಟಿಲು ಇದೆ. ಕುಳಿತಾಗ ಎಲ್ಲವೂ ಕಣ್ಮುಂದೆ ಬಂದು ಹೋಗುತ್ತದೆ.