ಸೋಂಕು ತಗುಲಿದ್ರೆ ಮಮತಾರನ್ನು ತಬ್ಬಿಕೊಳ್ಳುತ್ತಿದ್ದೆ ಎಂದ ಸಂಸದನಿಗೆ ಕರೊನಾ ಪಾಸಿಟಿವ್​!

mamatha1
Published on

ಕೋಲ್ಕತಾ: ಕರೊನಾ ಬಂದ್ರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುತ್ತಿದ್ದೆ ಎಂದ ಸಂಸದನಿಗೆ ಕರೊನಾ ಪಾಸಿಟಿವ್​! ನನಗೇನಾದರೂ ಕರೊನಾ ಪಾಸಿಟಿವ್​ ಬಂದಿದ್ದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ತಬ್ಬಿಕೊಳ್ಳುತ್ತಿದೆ ಎಂದು ಹೇಳಿದ್ದ ಬಿಜೆಪಿ ಮುಖಂಡ ಅನುಪಮ್ ಹಜ್ರಾ ಅವರಿಗೆ ಕರೊನಾ ಪಾಸಿಟಿವ್​ ವರದಿ ಬಂದಿದೆ.

ಟಿಎಂಸಿಯ ಸಂಸದರಾಗಿದ್ದ ಹಜ್ರಾ, ಕಳೆದ ವರ್ಷ ಬಿಜೆಪಿಗೆ ಸೇರಿದ್ದಾರೆ. ಇತ್ತೀಚೆಗೆ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಅವರು ಮಮತಾ ಬ್ಯಾನರ್ಜಿ ವಿರುದ್ಧ ತಬ್ಬಿಕೊಳ್ಳುವ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ.

ಕರೊನಾ ಪಾಸಿಟಿವ್​ ಬಂದಿರುವ ವ್ಯಕ್ತಿಗಳ ಕುಟುಂಬಸ್ಥರು ಯಾವ ರೀತಿಯಲ್ಲಿ ನೋವನ್ನು ಅನುಭವಿಸುತ್ತಿರುತ್ತಾರೆ, ಅವರ ಮನೆಯಲ್ಲಿ ಎಂಥ ಬಿಗುವಿನ ವಾತಾವರಣ ಇರುತ್ತದೆ ಎನ್ನುವುದನ್ನು ತೋರಿಸುವ ಸಲುವಾಗಿ ನಾನು ಮಮತಾ ಅವರನ್ನು ತಬ್ಬಿಕೊಳ್ಳುತ್ತಿದ್ದೆ ಎಂದು ಇತ್ತೀಚೆಗಷ್ಟೇ ಕಿಡಿ ಕಾರಿದ್ದರು.

ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಜ್ರಾ ಈ ಹೇಳಿಕೆಯನ್ನು ನೀಡಿದ್ದರು. ಕಾರ್ಯಕ್ರಮದಲ್ಲಿ ಹಜ್ರಾ ಮತ್ತು ಕೆಲ ಬಿಜೆಪಿ ಕಾರ್ಯಕರ್ತರು ಮಾಸ್ಕ್ ಧರಿಸಿರಲಿಲ್ಲ. ಈ ಬಗ್ಗೆ ಅನುಪಮ್ ಹಜ್ರಾ ಬಳಿ ಪ್ರಶ್ನೆ ಮಾಡಲಾಗಿತ್ತು. ಆಗ ಈ ವೇಳೆ ಮಾತನಾಡಿದ ಹಜ್ರಾ, “ನಮ್ಮ ಪಕ್ಷದ ಕಾರ್ಯಕರ್ತರು ಕರೊನಾಕ್ಕಿಂತ ದೊಡ್ಡ ಶತ್ರುಗಳ ವಿರುದ್ಧ ಹೋರಾಡುತ್ತಿದ್ದಾರೆ. ಅವರು ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ” ಎಂದಿದ್ದರು. ಜತೆಗೆ ತಬ್ಬಿಕೊಳ್ಳುವ ಮಾತನಾಡಿದ್ದರು.

ಇದೀಗ ಅವರಿಗೆ ಸೋಂಕು ದೃಢಪಟ್ಟಿದೆ. ಕೋಲ್ಕತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈ ನಡುವೆಯೇ, ಟಿಎಂಸಿ ಹಜ್ರಾ ಹೇಳಿಕೆಯ ವಿರುದ್ಧ ಸಿಲಿಗುರಿಯಲ್ಲಿ ಪೊಲೀಸ್ ದೂರು ದಾಖಲಾಗಿದೆ. ನಾವು ಅನುಪಮ್ ಹಜ್ರಾ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇವೆ. ಕೂಡಲೇ ಅವರ ವಿರುದ್ಧ ಕ್ರಗೊಳ್ಳಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದೇವೆ ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net