ಮೋಹನ್ ಭಾಗವತ್​ರನ್ನು 'ರಾಷ್ಟ್ರಪಿತ', 'ರಾಷ್ಟ್ರ ಋಷಿ' ಎಂದು ಬಣ್ಣಿಸಿದ್ದ ಇಲ್ಯಾಸಿಗೆ ಜೀವ ಬೆದರಿಕೆ!

bhagwath
Published on

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್)‌ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು 'ರಾಷ್ಟ್ರಪಿತ' ಮತ್ತು 'ರಾಷ್ಟ್ರ ಋಷಿ' ಎಂದು ಬಣ್ಣಿಸಿದ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ (ಎಐಐಒ) ಮುಖ್ಯಸ್ಥ ಡಾ. ಇಮಾಮ್​ ಉಮರ್ ಅಹ್ಮದ್ ಇಲ್ಯಾಸಿ ಅವರಿಗೆ ಬೆದರಿಕೆಗಳು ಬಂದಿವೆ.

ಸೆಪ್ಟೆಂಬರ್ 23 ರಂದು ಇಂಗ್ಲೆಂಡಿನಿಂದ ಫೋನ್ ಕರೆ ಬಂದಿದೆ. ಕರೆಯಲ್ಲಿ ತಲೆ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಮಾತನಾಡಿರುವ ಇಲ್ಯಾಸಿ, 'ಇಂಗ್ಲೆಂಡ್‌ನಿಂದ ಕರೆ ಬಂದಿತ್ತು. ವ್ಯಕ್ತಿಯೊಬ್ಬ ಮೊದಲು ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ' ಎಂದಿದ್ದಾರೆ.

ಯಾರೇ ಬೆದರಿಕೆ ಹಾಕಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮೋಹನ್ ಭಾಗವತ್ ಅವರನ್ನು 'ರಾಷ್ಟ್ರಪಿತ' ಮತ್ತು 'ರಾಷ್ಟ್ರ ಋಷಿ' ಎಂದು ಬಣ್ಣಿಸಿದ ನನ್ನ ಮಾತನ್ನು ನಾನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ. ಇದರ ಪರಿಣಾಮ ಏನೇ ಇದ್ದರೂ ಎದುರಿಸುತ್ತೇನೆ ಎಂದಿದ್ದಾರೆ. ಬೆದರಿಕೆಯ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲಿನ ನಿಷೇಧದ ಕುರಿತು ಇಲ್ಯಾಸಿ ಸ್ವಾಗತಿಸಿದ್ದಾರೆ.


ದೆಹಲಿಯ ಮಸೀದಿಯೊಂದರಲ್ಲಿ ಮೋಹನ್ ಭಾಗವತ್ ಮತ್ತು ಡಾ. ಉಮರ್ ಅಹ್ಮದ್ ಇಲ್ಯಾಸಿ ನಡುವೆ ಸಭೆ ನಡೆದಿತ್ತು. ಆ ಸಂದರ್ಭದಲ್ಲಿ ಸಂತೋಷ ವ್ಯಕ್ತಪಡಿಸಿದ್ದ ಇಲ್ಯಾಸಿ ಅವರು, ಭಾಗವತ ಅವರನ್ನು ‘ರಾಷ್ಟ್ರಪಿತ’ ಎಂದು ಕರೆದಿದ್ದರು. 'ಇಂದು ನನ್ನ ಆಹ್ವಾನದ ಮೇರೆಗೆ ಮೋಹನ್ ಭಾಗವತ್ ಬಂದಿದ್ದಾರೆ. ಅವರು 'ರಾಷ್ಟ್ರಪಿತ' ಮತ್ತು 'ರಾಷ್ಟ್ರ ಋಷಿ'. ಇಂದಿನ ಭೇಟಿ ದೇಶಕ್ಕೆ ಉತ್ತಮ ಸಂದೇಶ ನೀಡಲಿದೆ' ಎಂದಿದ್ದರು.

'ಭಾಗವತ್‌ ಭೇಟಿಯಿಂದಾಗಿ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಲಿದೆ. ನಾವು ದೇವರನ್ನು ಆರಾಧಿಸುವ ಮಾರ್ಗ ಬೇರೆಯಾಗಿರಬಹುದು, ಆದರೆ ನಾವೆಲ್ಲರೂ ಒಂದೇ. ಮಾನವೀಯತೆಗಿಂತ ದೊಡ್ಡ ಧರ್ಮ ಬೇರೊಂದಿಲ್ಲ. ದೇಶ ಮೊದಲು ಎಂಬುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ' ಎಂದು ಇಲ್ಯಾಸಿ ನುಡಿದಿದ್ದರು.

ಇನ್ನು ಮುಸ್ಲಿಂ ಮುಖಂಡರೊಂದಿಗಿನ ಮೋಹನ್‌ ಭಾಗವತ್‌ ಅವರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್‌, ಇದು ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ʼಭಾರತ್‌ ಜೋಡೋʼ ಯಾತ್ರೆಯ ಪ್ರತಿಫಲ ಎಂದು ವ್ಯಂಗ್ಯವಾಡಿತ್ತು. 'ಭಾರತ್‌ ಜೋಡೋʼ ಯಾತ್ರೆಯಿಂದಾಗಿ ದೇಶದಲ್ಲಿ ಕೋಮು ಸೌಹಾರ್ದತೆ ಗಟ್ಟಿಗೊಳ್ಳುತ್ತಿದೆ ಎಂದಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net