ಇತಿಹಾಸ ಬರೆದ ಹು-ಧಾ ಮೇಯರ್​: ಬ್ರಿಟಿಷ್​ ಕಾಲದ ಸಂಪ್ರದಾಯಕ್ಕೆ ಬೈ ಬೈ- ಹೊಸತನಕ್ಕೆ ಮುನ್ನುಡಿ...

mayor
Published on

ಧಾರವಾಡ: ತಲೆತರಾಂತರಗಳ ಶಿಷ್ಟಾಚಾರಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್​ ತಿಲಾಂಜಲಿ ಇತ್ತಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮೇಯರ್​ ಎಂದಾಕ್ಷಣ ನೆನಪಾಗುವುದು, ಗೌನ್​. ಬ್ರಿಟಿಷರ ಕಾಲದಿಂದಲೂ ಗೌನ್​ ಧರಿಸಿಕೊಂಡು ಮೇಯರ್​ ಸಭೆಗೆ ಹಾಜರಾಗುವುದು ಸಂಪ್ರದಾಯ. ಆದರೆ ಇದೇ ಸಂಪ್ರದಾಯಕ್ಕೆ ತಿಲಾಂಜಲಿ ಇತ್ತು ಇತಿಹಾಸ ಸೃಷ್ಟಿಸಿದ್ದಾರೆ ಬಿಜೆಪಿಯ ಮೇಯರ್​ ಈರೇಶ ಅಂಚಟಗೇರಿ.

ಕಳೆದ ವಾರ ರಾಷ್ಟ್ರಪತಿ, ಮುಖ್ಯಮಂತ್ರಿಗಳು ಆಗಮಿಸಿದ್ದ ವೇಳೆ ಕೂಡ ಈ ಸಂಪ್ರದಾಯವನ್ನು ಮುರಿದು ಗೌನ್​ ಧರಿಸದೇ ಅವರನ್ನು ಸ್ವಾಗತಿಸಿದ್ದ ಮೇಯರ್​ ಈರೇಶ ಅಂಚಟಗೇರಿ ಅವರು, ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಗೌನ್‌ ಧರಿಸದೇ ಭಾಗವಹಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಈ ಬಗ್ಗೆ ಪರ-ವಿರೋಧಗಳ ಚರ್ಚೆ ಶುರುವಾಗಿದೆ. ಹಿರಿಯ ರಾಜಕಾರಣಿಗಳು ಬಂದಾಗ ಅವರ ಸ್ವಾಗತಕ್ಕೆ ಮೇಯರ್ ಗೌನ್ ಧರಿಸಿ ಬರೋದು ಶಿಷ್ಠಾಚಾರ. ಇದೇ ಶಿಷ್ಠಾಚಾರಕ್ಕೆ ಬ್ರೇಕ್ ಹಾಕಿದ ಈರೇಶ ಅವರ ಕುರಿತು ಭಾರಿ ಚರ್ಚೆ ಶುರುವಾಗಿದೆ.

ರಾಜ್ಯದ 10 ಮಹಾನಗರ ಪಾಲಿಕೆಯಗಳಲ್ಲಿ ಬ್ರಿಟಿಷ್​ ಕಾಲದ ಈ ಸಂಪ್ರದಾಯ ಜಾರಿಯಲ್ಲಿದ್ದು, ಸಂಪ್ರದಾಯ ಮುರಿದ ರಾಜ್ಯದ ಮೊದಲ ಮೇಯರ್ ಎಂಬ ಹೆಗ್ಗಳಿಕೆ ಈರೇಶ ಅವರದ್ದು.

ಈ ಬಗ್ಗೆ ಅವರು ಹೇಳಿದ್ದೇನೆಂದರೆ, 'ಮಹಾಪೌರರ ವಿಷಯದಲ್ಲಿ ಹೇಗಿರಬೇಕು ಅಂತ ತಿಳಿದುಕೊಳ್ಳಲು ಗೂಗಲ್ ಸರ್ಚ್ ಮಾಡಿದ್ದೆ. ಈ ಪದ್ಧತಿ ಶುರುವಾಗಿದ್ದು ಬ್ರಿಟಿಷರ ಕಾಲದಿಂದ ಎಂದು ತಿಳಿಯಿತು. ಗೌನ್​ ಧರಿಸುವುದು ಕೂಡ ಅವರದ್ದೇ ಸಂಪ್ರದಾಯ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಂಡಿರುವ ನಾವು ಇನ್ನೂ ಬ್ರಿಟಿಷ್​ ಸಂಪ್ರದಾಯವನ್ನು ಪಾಲಿಸುತ್ತಿರುವುದು ಎಷ್ಟು ಸರಿ ಎಂದು ಎನಿಸಿ ಅದನ್ನು ತ್ಯಜಿಸಿದೆ' ಎಂದಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಪತ್ರ ಬರೆದು ತಾವು ಅನುಮತಿ ಕೋರಿದ್ದಾರೆ ಹೇಳಿದ್ದಾರೆ. ಮೇಯರ್ ಪತ್ರಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿದ ನಂತರ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ.

ಅಂದ ಹಾಗೆ, ಈ ವಿಷಯ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸರಿ ಎನಿಸಿದ್ದು, ರಾಜ್ಯದ ಎಲ್ಲ ಮೇಯರ್ ಗಳಿಗೂ ಗೌನ್ ಧರಿಸದಂತೆ ಆದೇಶ ಮಾಡಲು ನಿರ್ಧರಿಸಿದ್ದಾರೆ. ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಈ ಕೊಡುಗೆ ಎನ್ನಲಾಗಿದೆ.

ಆದರೆ, ಇಂದು ಮೇಯರ್​ ಅವರು ಗೌನ್​ ಧರಿಸದೇ ಬಂದ ಕಾರಣ, ಸಭೆಯಲ್ಲಿ ಭಾರಿ ಕೋಲಾಹಲ, ಗದ್ದಲವೂ ಆಯಿತು. ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಇದಕ್ಕೆ ಕ್ಯಾತೆ ತೆಗೆದರು. ಗೌನ್ ಧರಿಸಿಯೇ ಸಭೆಗೆ ಬರಬೇಕೆಂದು ಆಗ್ರಹಿಸಿದರು. ಮೇಯರ್ ಮನವಿಗೂ ಸ್ಪಂದಿಸದೇ ಕೈ ಕಾರ್ಪೊರೇಟರ್ಸ್ ಗಲಾಟೆ ಮಾಡಿದ್ದರಿಂದ ಮೇಯರ್ ಈರೇಶ ​ ಅವರು ಹೊರಕ್ಕೆ ನಡೆದ ಘಟನೆಯೂ ಆಯಿತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net