

ಕೋಯಿಕ್ಕೋಡ್ (ಕೇರಳ): ಸಿನಿಮಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಮೇಲೆ ಹಾಗೂ ತಮ್ಮ ಸಹೊದ್ಯೋಗಿ ನಟಿಯ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಮಲಯಾಳದ ಪ್ರಸಿದ್ಧ ತಾರೆಯೊಬ್ಬರು ಹೇಳಿಕೊಂಡಿದ್ದಾರೆ.
ಕೇರಳದ ಕೋಯಿಕ್ಕೋಡ್ನ ಮಾಲ್‌ನಲ್ಲಿ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ತಮಗೆ ಮತ್ತು ಇನ್ನೋರ್ವ ನಟಿ ಗ್ರೇಸ್ ಆಂಟೋನಿ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಜನಪ್ರಿಯ ಮಲಯಾಳಿ ನಟಿ ಸಾನಿಯಾ ಐಯಪ್ಪನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಇಬ್ಬರು ನಟಿಯರು ಕೋಯಿಕ್ಕೋಡ್ನ ಹಿಲೈಟ್ ಮಾಲ್‌ನಲ್ಲಿ ತಮ್ಮ ಮುಂಬರುವ ಚಿತ್ರ 'ಸ್ಯಾಟರ್ಡೇ ನೈಟ್' ಅನ್ನು ಪ್ರಚಾರ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮಗಾದ ಸಂಕಟವನ್ನು ಹಂಚಿಕೊಂಡ ಸಾನಿಯಾ, 'ನಾನು ಮತ್ತು ನನ್ನ ಚಿತ್ರ ತಂಡವು ಸಿನಿಮಾದ ಪ್ರಚಾರ ಮಾಡುತ್ತಿದ್ದೆವು. ಮಾಲ್‌ನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಪರೀತ ಜನರು ಬಂದಿದ್ದ ಹಿನ್ನೆಲೆಯಲ್ಲಿ ಭದ್ರತೆಯನ್ನು ಮಾಡುವುದು ಕೂಡ ಕಷ್ಟವಾಗಿ ಪರಿಣಮಿಸಿತು' ಎಂದು ಹೇಳಿದ್ದಾರೆ.
"ಈವೆಂಟ್ ನಂತರ, ನಾನು ಮತ್ತು ನನ್ನ ಸಹ ನಟಿಯೊಬ್ಬರು ಹೊರಗೆ ಹೋಗುತ್ತಿದ್ದೆವು. ಆ ಸಂದರ್ಭದಲ್ಲಿ ನನ್ನ ಸಹೋದ್ಯೋಗಿಯೊಂದಿಗೆ ಆರಂಭದಲ್ಲಿ ಜನರು ಲೈಂಗಿಕವಾಗಿ ಅನುಚಿತವಾಗಿ ವರ್ತಿಸಿದರು. ಆದರೆ ವಿಪರೀತ ಜನಸಂದಣಿ ಇದ್ದ ಹಿನ್ನೆಲೆಯಲ್ಲಿ ಆಕೆಗೆ ಯಾರು ಹೀಗೆ ಮಾಡಿದ್ದಾರೆ ಎಂದು ನೋಡಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ದೂರ ಹೋದ ಮೇಲೆ ನನಗೂ ಇದೇ ರೀತಿ ಕಹಿ ಅನುಭವವಾಯಿತು. ಕೋಯಿಕ್ಕೋಡ್ ನನಗೆ ತುಂಬಾ ಇಷ್ಟವಾದ ಸ್ಥಳ. ಆದರೆ ಇಂದು ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ನನ್ನನ್ನು ಹಿಡಿದುಕೊಂಡಿದ್ದರು, ಅವರ ಈ ಕೃತ್ಯ ಹೇಳಲು ನನಗೆ ಅಸಹ್ಯವಾಗುತ್ತಿದೆ' ಎಂದಿದ್ದಾರೆ.
'ಆ ಸಮಯದಲ್ಲಿ ನಾನು ಹೇಗೆ ಪ್ರತಿಕ್ರಿಯೆ ನೀಡಿದೆ ಎಂದು ಇಲ್ಲಿರುವ ವಿಡಿಯೋದಲ್ಲಿ ನೋಡಬಹುದು' ಎಂದು ವಿಡಿಯೋ ಒಂದನ್ನು ನಟಿ ಸಾನಿಯಾ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನಿಗೆ ನಟಿ ಹೊಡೆಯುವುದನ್ನು ಕಾಣಬಹುದಾಗಿದೆ.
"ಯಾರಿಗೂ ಇಂಥ ಕಹಿ ಅನುಭವ ಆಗಬಾರದು. ಮಹಿಳೆಯರ ಮೇಲಿನ ಇಂಥ ದೌರ್ಜನ್ಯವನ್ನು ಯಾರೂ ಸುಮ್ಮನೇ ಬಿಡಬಾರದು. ಇದೇ ಕಾರಣಕ್ಕೆ ನಾನು ಆ ರೀತಿ ನಡೆದುಕೊಂಡೆ' ಎಂದು ಅವರು ಹೇಳಿದ್ದಾರೆ. ಈ ರೀತಿ ಕಹಿ ಅನುಭವ ಅನುಭವಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇಂಥದ್ದೇ ಕಹಿ ಅನುಭವ ಆಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಈ ಪ್ರಕರಣದ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ. ನಟಿಯರನ್ನು ನಿಂದಿಸಿದವರನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಇಲ್ಲಿದೆ ನೋಡಿ ವಿಡಿಯೋ: