ಲವ್​ ಫೇಲ್ಯೂರ್​ಗೆ​ ₹5, ಹೊಸ ಲವ್​ಗೆ ₹10, ಲವರ್​ ಬಿಟ್ಟು ಹೋದ್ರೆ ₹15, ಇಷ್ಟದ ಲವರ್​ಗಾಗಿ​ ₹49

tea1
Published on

ಗ್ವಾಲಿಯರ್​ (ಮಧ್ಯಪ್ರದೇಶ): ಚಹ ಎಂದರೆ ಬಹುತೇಕ ಮಂದಿಗೆ ಬಹಳ ಪ್ರೀತಿ. ಬೆಳಗ್ಗೆ ಎದ್ದು ಒಂದು ಲೋಟ ಚಹ ಕುಡಿದಿಲ್ಲ ಎಂದರೆ ಇಡೀ ದಿನದ ಮೂಡ್​ ಹಾಳಾಗುತ್ತದೆ ಎನ್ನುವವರು ಹಲವರಿದ್ದಾರೆ. ತಲೆನೋವು ಬಂದರೆ, ಕೆಲಸ ಮಾಡುವಾಗ ನಿದ್ದೆ ಬಂದರೆ, ಮೂಡ್​ ಸರಿ ಮಾಡಲು... ಹೀಗೆ ಅನೇಕ ರೀತಿಯ ಕೆಲಸ ಕಾರ್ಯಗಳಿಗೆ ಚಹದ ಚಟಕ್ಕೆ ಬಿದ್ದವರು ಇದ್ದಾರೆ.

ಇದೇ ಕಾರಣಕ್ಕೆ ಥಹರೇವಾರಿ ರೀತಿಯ ಚಹ ಮಾಡಿ ಮಾರಾಟ ಮಾಡುವುದು ಈಗ ಸರ್ವೇ ಸಾಮಾನ್ಯ. ಜಿಂಜರ್ ಟೀ​, ಮಿಂಟ್​ ಟೀ, ಬ್ಲ್ಯಾಕ್​ ಟಿ, ಗ್ರೀನ್​ ಟೀ, ಕೇಟಿ... ಹೀಗೆ ಒಂದಾ... ಎರಡಾ... ಚಹದಲ್ಲಿಯೇ ಹತ್ತಾರು ಬಗೆಯ ಚಹಾಗಳು ಇದೀಗ ಲಭ್ಯ.

ಇವೆಲ್ಲಾ ಚಹಗಳನ್ನು ಎಲ್ಲರೂ ಸಾಮಾನ್ಯವಾಗಿ ಕೇಳಿ ಇರ್ತೀರಾ. ಆದರೆ ಉತ್ತರ ಪ್ರದೇಶದ ಗ್ಯಾಲಿಯರ್​ನ ಟೀಸ್ಟಾಲ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚಹದ ವಿಷಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಸಾಮಾನ್ಯವಾಗಿ ಯಾರೂ ಕಂಡು ಕೇಳರಿಯದ ಟೀಗಳನ್ನು ತಾವು ಮಾಡಿಕೊಡುತ್ತಿರುವುದಾಗಿ ಈ ಸ್ಟಾಲ್​ ಮುಂದೆ ಬೋರ್ಡ್​ ಹಾಕಲಾಗಿದೆ.

ಅಷ್ಟಕ್ಕೂ ಇಲ್ಲಿಯ ಚಹದ ವಿಶೇಷವೇನೆಂದು ನೀವೇ ಈ ಚಿತ್ರದಲ್ಲಿ ನೋಡಿ...

ಗ್ವಾಲಿಯರ್​ನ ಹನುಮಂತನಗರದ ಕಾಲೂ ಬೇವಫಾ ಚಾಯ್​ವಾಲಾ ಎನ್ನುವ ಟೀ ಸ್ಟಾಲ್​ ಮುಂದಿರುವ ಈ ಲಿಸ್ಟ್​ನಲ್ಲಿ ಕುತೂಹಲ ಎನಿಸುವಂಥ ಚಹಗಳ ಲಿಸ್ಟ್​ ಮಾಡಲಾಗಿದೆ.

ಸಿಂಗಲ್​ ಆಗಿದ್ದರೆ, ಜೋಡಿ ಜತೆ ಬಂದರೆ, ಲವ್​ ಫೇಲ್ಯೂಯರ್​ ಆಗಿದ್ದರೆ, ಹೊಸದಾಗಿ ಪ್ರೇಮಾಂಕುರವಾಗಿದ್ದರೆ, ಪ್ರೇಮಿ ಕೈಕೊಟ್ಟು ಓಡಿ ಹೋಗಿದ್ದರೆ, ಒಂಟಿಗನ ಕಾಡುತ್ತಿದ್ದರೆ ... ಹೀಗೆ ಎಲ್ಲದ್ದಕ್ಕೂ ಇಲ್ಲಿ ವಿಶೇಷ ಚಹ ಸಿಗುತ್ತದೆ ಎಂದು ಬೋರ್ಡ್​ನಲ್ಲಿ ಹಾಕಲಾಗಿದ್ದು, ಒಂದೊಂದು ಟೀಗೆ ಒಂದೊಂದು ರೇಟ್​ ಫಿಕ್ಸ್ ಮಾಡಲಾಗಿದೆ.

ಪ್ರೀತಿಯಲ್ಲಿ ಮೋಸ ಹೋಗಿದ್ದರೆ ರೂ.5, ಹೊಸ ಲವ್​ ಶುರುವಾದ್ರೆ ರೂ. 10, ಲವರ್​ ಬಿಟ್ಟು ಹೋಗಿದ್ದರೆ ರೂ. 15... ಹೀಗೆ ರೇಟ್​ ಫಿಕ್ಸ್​ ಆಗಿದೆ. ನಿಮ್ಮಿಷ್ಟದ ಪ್ರೇಮಿ ಸಿಗಲು ಅತಿ ಹೆಚ್ಚು ರೇಟ್​ ಫಿಕ್ಸ್ ಮಾಡಲಾಗಿದೆ. ಇದಕ್ಕೆ 49 ರೂಪಾಯಿ ಇದೆ. ಒಂಟಿತನ ಹೋಗಲಾಡಿಸಲು 20 ರೂಪಾಯಿ ಫಿಕ್ಸ್​ ಮಾಡಲಾಗಿದೆ.

ಇನ್ನೂ ವಿಶೇಷ ಎಂದರೆ, ಹೆಂಡತಿಯನ್ನು ಕರೆದುಕೊಂಡು ಬಂದು ಇಲ್ಲಿಯ ಚಹದ ಡೆಮೋ ತೋರಿಸಿದರೆ ಅಂಥವರಿಗೆ ಉಚಿತವಾಗಿ ಚಹ ನೀಡಲಾಗುವುದು ಎಂದೂ ಬರೆಯಲಾಗಿದೆ!

ಈ ಟೀ ಸ್ಟಾಲ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಸ್ಟಾಲ್​ಗೆ ಭಾರಿ ಡಿಮಾಂಡ್​ ಬಂದಿದೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net