

ಕೆಮೆರೊವೊ (ರಷ್ಯಾ): ರಷ್ಯಾದ ಕೆಮೆರೊವೊದಲ್ಲಿ ನಾಯಿಗಳ ಮಾರಣಹೋಮ ನಡೆದಿದ್ದು, ಅವುಗಳನ್ನು ಮರದ ಮೇಲೆ ನೇತುಹಾಕಲಾಗಿದೆ. ಇಂಥದ್ದೊಂದು ಭಯಾನಕ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇಂಥದ್ದೊಂದು ಕೃತ್ಯ ಎಸಗಿದವರು ಯಾರು ಎಂಬ ಬಗ್ಗೆ ಇದೀಗ ತನಿಖೆಗೆ ಆದೇಶಿಸಲಾಗಿದೆ.
ಮೃತಪಟ್ಟಿರುವ ನಾಯಿಗಳೆಲ್ಲಾ ಉತ್ತಮ ಜಾತಿಯ ನಾಯಿಗಳಾಗಿವೆ. ನಾಯಿಯ ಶವ ಮೇಲೆ ತೂಗು ಹಾಕಿರುವ ಹಿನ್ನೆಲೆಯಲ್ಲಿ ಅವುಗಳ ರಕ್ತವು ಇಡಿಯ ರಸ್ತೆಯ ತುಂಬಾ ತೊಟ್ಟಿಕ್ಕುತ್ತಿದ್ದು, ಅತ್ಯಂತ ಭಯಾನಕ ವಾತಾವರಣ ಸೃಷ್ಟಿಯಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ನಾಯಿಗಳನ್ನು ವ್ಯಕ್ತಿಯೊಬ್ಬ ಗುಂಡು ಹಾಕಿ ಸಾಯಿಸಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆ ವ್ಯಕ್ತಿಯ ಆಡುಗಳನ್ನು ಈ ನಾಯಿಗಳನ್ನು ಕೊಂದು ಹಾಕಿದ್ದವಂತೆ. ಅದಕ್ಕಾಗಿ ನಾಯಿಗಳ ಮಾಲೀಕರಿಗೆ ಬುದ್ಧಿ ಕಲಿಸುವ ಸಲುವಾಗಿ ಆತ ಎಲ್ಲಾ ನಾಯಿಗಳನ್ನು ಗುಂಡು ಹಾಕಿ ಕೊಂದಿದ್ದಾನೆ. ನಂತರ ಬರಿ ಕೊಂದರೆ ಸಾಲದು ಎಂದು ಇದು ಇತರ ಎಲ್ಲಾ ನಾಯಿಗಳ ಮಾಲೀಕರಿಗೆ ಪಾಠ ಆಗಬೇಕು ಎನ್ನುವ ಕಾರಣಕ್ಕೆ ತೂಗು ಹಾಕಿರುವುದಾಗಿ ತಿಳಿದುಬಂದಿದೆ.
ಆದರೂ ಇದರ ಸತ್ಯಾಸತ್ಯತೆಯ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ರಷ್ಯಾದ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಇದು ಉದ್ದೇಶಪೂರ್ವಕವಾಗಿ ನಡೆದಿರುವ ಕೃತ್ಯ ಎಂದು ಆರೋಪಿಸಿದ್ದಾರೆ. ನಾಯಿ ಮತ್ತು ಬೆಕ್ಕುಗಳನ್ನು ಇಲ್ಲೊಂದು ವರ್ಗ ನಿರಂತರವಾಗಿ ಸಾಯಿಸುತ್ತಿದ್ದು, ಈ ಬಗ್ಗೆ ತನಿಖೆ ಅಗತ್ಯವಿದೆ ಎಂದು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ತನಿಖೆ ಶುರು ಮಾಡಲಾಗಿದೆ.