

ಲಖನೌ: ಭಾರಿ ಗುಂಪು ಕಟ್ಟಿಕೊಂಡು ಮೆರವಣಿಗೆ ಮೂಲಕ ಉತ್ತರ ಪ್ರದೇಶದ ಹತ್ರಾಸ್ ಗ್ರಾಮಕ್ಕೆ ಭೇಟಿನೀಡಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಹೋಗುತ್ತಿದ್ದ ಸಂದರ್ಭದಲ್ಲಿ ಭಾರಿ ಗಲಾಟೆಯಾದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
19 ವರ್ಷದ ಯುವತಿಯ ಮೇಲೆ ಆಗಿರುವ ಗ್ಯಾಂಗ್ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಕುಟುಂಬವನ್ನು ಭೇಟಿಯಾಗಲು ಮೆರವಣಿಗೆ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಹೋಗುತ್ತಿದ್ದರು. ದಾರಿಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದರು.
ಮೊದಲು ಎಲ್ಲರೂ ಕಾರಿನಲ್ಲಿ ಬರುತ್ತಿದ್ದರು. ಆದರೆ ಪೊಲೀಸರು ಅವರನ್ನು ಮಾರ್ಗಮಧ್ಯೆಯೇ ತಡೆದರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಹಾಗೂ ಭಾರಿ ಗುಂಪು ನಡೆದುಕೊಂಡು ಬರಲು ಶುರುಮಾಡಿತು. ಬೃಹತ್ ಗುಂಪು ಇದ್ದುದರಿಂದ ಯಾವುದೇ ಕ್ಷಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಬಹುದು ಎಂದು ಅರಿತ ಪೊಲೀಸರು ಅವರನ್ನು ಅಲ್ಲಿಯೇ ತಡೆದು ಮುಂದುವರೆಯಲು ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ರಾಹುಲ್ ಹಾಗೂ ಪ್ರಿಯಾಂಕಾ ನೇತೃತ್ವದ ಗುಂಪು ರಸ್ತೆಯಲ್ಲಿಯೇ ಕುಳಿತುಕೊಂಡಿದ್ದಾರೆ.
ಕರೊನಾ ವೈರಸ್ ಹಿನ್ನೆಲೆಯಲ್ಲಿ ಇಷ್ಟೊಂದು ಮಂದಿಯ ಗುಂಪು ಬರುವುದು ಸರಿಯಲ್ಲ ಎಂದು ತಾವು ತಡೆದಿರುವುದಾಗಿ ಪೊಲೀಸರು ಹೇಳಿದರು. ಈ ನಡುವೆ, ಸಮಾಜವಾದಿ ಪಕ್ಷವು ಹತ್ರಾಸ್ ಗಡಿಯಲ್ಲಿ ಪ್ರತಿಭಟನೆ ನಡೆಸಿತು.