ಆಹಾರ ನೀಡಿ ಎಂದರೆ ಬೇರೆಬೇರೆ ಚಟುವಟಿಕೆ: ಸ್ವಿಗ್ಗಿ, ಜೊಮಾಟೊ ವಿರುದ್ಧ ಗೂಗಲ್​ ಗರಂ- ನೋಟಿಸ್​

swiggy
Published on

ನವದೆಹಲಿ: ಜೂಜಿಗೆ ಪ್ರೋತ್ಸಾಹ ನೀಡುವುದು, ಜನರಿಗೆ ಏನೇನೋ ಬೇಡದ ಆಫರ್​ಗಳ ಆಮಿಷ ಒಡ್ಡುವುದು ಇತ್ಯಾದಿ ಮಾಡಿ ಗೂಗಲ್​ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಈಚೆಗಷ್ಟೇ ಕಿಡಿ ಕಾರಿದ್ದ ಗೂಗಲ್​ ಸಂಸ್ಥೆ, ತನ್ನ ಪ್ಲೇಸ್ಟೋರ್​ನಿಂದ ಪೇಟಿಎಂ ಆ್ಯಪ್​ ಕಿತ್ತುಹಾಕಿ ಬುದ್ಧಿ ಕಲಿಸಿತ್ತು.

ಆದರೆ ಇಂಥ ಕಠಿಣ ನಿರ್ಧಾರವನ್ನು ಗೂಗಲ್​ ತೆಗೆದುಕೊಂಡಿದ್ದರೂ, ಇದೀಗ ಅದೇ ಹಾದಿಯನ್ನು ಹಿಡಿದಿದೆ ಸ್ವಿಗ್ಗಿ ಹಾಗೂ ಜೊಮಾಟೊ. ಕೂತಲ್ಲಿಯೇ ಆಹಾರ ತರಿಸಿಕೊಂಡು ತಿನ್ನುವ ಚಟವುಳ್ಳವರಿಗೆ ಅನುಕೂಲ ಕಲ್ಪಿಸುತ್ತಿರುವ ಈ ಕಂಪೆನಿಗಳಿಗೆ ಗೂಗಲ್​ ಕೆಲವೊಂದು ನಿಯಮಗಳನ್ನು ಒಡ್ಡಿದ್ದು, ಅದನ್ನು ಮೀರಿರುವ ಆರೋಪ ಎದುರಿಸುತ್ತಿವೆ.

ಆಫರ್​ ನೀಡುವುದು, ಗಿಫ್ಟ್​ ವೋಚರ್​ ನೀಡುವ ಮೂಲಕ ಗ್ರಾಹಕರಿಗೆ ಮಂಕುಬೂದಿ ಎರೆಚುವ ಕೆಲಸವನ್ನು ಮಾಡಬೇಡಿ ಎಂದು ಈಗಾಗಲೇ ಅನೇಕ ಆ್ಯಪ್ ಆಧಾರಿತ ಕಂಪೆನಿ​ಗಳಿಗೆ ಗೂಗಲ್​ ಹೇಳಿದೆ. ಅದೇ ರೀತಿ ಈ ಎರಡು ಆಹಾರ ಸಂಸ್ಥೆಗಳಿಗೂ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ.

ಆದರೆ ಇವುಗಳನ್ನು ಮೀರಿ ಕೂಪನ್ ಕೋಡ್, ಆಫರ್, ಗಿಫ್ಟ್​ ವೋಚರ್ ನೀಡುವ ಮೂಲಕ ಸ್ವಿಗ್ಗಿ ಮತ್ತು ಜೊಮಾಟೊ ಕಂಪೆನಿಗಳು ಗ್ರಾಹಕರನ್ನು ಆಕರ್ಷಿಸುವ ಕೆಲಸ ಮಾಡುತ್ತಿದೆ ಎನ್ನುವುದು ಗೂಗಲ್​ ಸಂಸ್ಥೆ ಆರೋಪ. ಈ ಹಿನ್ನೆಲೆಯಲ್ಲಿ ಈ ಎರಡೂ ಕಂಪೆನಿಗಳಿಗೆ ಗೂಗಲ್​ ನೋಟಿಸ್​ ಜಾರಿಗೊಳಿಸಿದೆ. ಇವೆರಡೂ ಆ್ಯಪ್‌ ಆಧಾರಿತ ಕಂಪನಿಗಳು ತನ್ನ ಪ್ಲೇ ಸ್ಟೋರ್‌ನ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂದು ಗೂಗಲ್‌ ಆರೋಪಿಸಿದೆ.

ಆದರೆ ಈ ಆರೋಪವನ್ನು ಜೊಮಾಟೋ ನಿರಾಕರಿಸಿದ್ದು, ಗೂಗಲ್‌ ಪ್ಲೇಸ್ಟೋರ್‌ನ ನಿಯಮಗಳನ್ನು ತಾನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಬಗ್ಗೆ ಸದ್ಯ ಗೂಗಲ್​ ಮುಂದಿನ ಪ್ರಕ್ರಿಯೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net