

ಬೆಂಗಳೂರು: ಕೌಟುಂಬಿಕ ಕಲಹದಿಂದ ನೊಂದು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊರಮಾವು ರಸ್ತೆ ನಿವಾಸಿ ಶ್ರುತಿ (32) ಮೃತರು. ಆ.23ರ ರಾತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಪಾಲಕರು ವರದಕ್ಷಣೆ ಕಿರುಕುಳ ಆರೋಪದಡಿ ದೂರು ನೀಡಿದ್ದಾರೆ. ಇದರ ಅನ್ವಯ ಶ್ರುತಿ ಪತಿ ಮಿಥುನ್ ರೆಡ್ಡಿ ಮತ್ತು ಅತ್ತೆ ಭಾಗ್ಯಮ್ಮ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
2014ರಲ್ಲಿ ಮಿಥುನ್ ರೆಡ್ಡಿ ಮತ್ತು ಶ್ರುತಿ ಮದುವೆಯಾಗಿದ್ದು, ದಂಪತಿಗೆ 5 ವರ್ಷದ ಗಂಡು ಮಗುವಿದೆ. 2019ರಲ್ಲಿ ಮಿಥುನ್ ಮತ್ತು ಅತ್ತೆ ಭಾಗ್ಯಮ್ಮ ವರದಕ್ಷಣೆ ತರುವಂತೆ ಒತ್ತಡ ಹೇರಿದ್ದರು. ಶ್ರುತಿ ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂ. ಅನ್ನು ಡ್ರಾ ಮಾಡಿಕೊಂಡಿದ್ದರು. ಆಗಸ್ಟ್ 20ರಂದು ವರಲಕ್ಷ್ಮಿ ಹಬ್ಬ ಮುಗಿಸಿಕೊಂಡು ವಾಪಸ್ ಮನೆಗೆ ಹೋಗುವಾಗ ಮಿಥುನ್ 1 ಲಕ್ಷ ರೂ. ಬೇಡಿಕೆ ಒಡ್ಡಿದ್ದರು. 35 ಸಾವಿರ ರೂ. ಅನ್ನು ಶ್ರುತಿ ಪಾಲಕರು ಕೊಟ್ಟಿದ್ದರು.
ಮನೆಗೆ ಬಂದ ಮೇಲೆ ಮಿಥುನ್, ಇನ್ನೂ 65 ಸಾವಿರ ರೂ. ಕೊಟ್ಟಿಲ್ಲವೆಂದು ಪತ್ನಿ ಮೇಲೆ ಜಗಳ ಮಾಡಿದ್ದಾನೆ. ನೊಂದ ಶ್ರುತಿ, ಪಾಲಕರಿಗೆ ಕರೆ ಮಾಡಿ ವಿಷಯ ತಿಳಿಸಿದ ಮೇಲೆ ಪತಿ ಮತ್ತು ಅತ್ತೆ ಹಲ್ಲೆ ನಡೆಸಿದ್ದಾರೆ. ಇದರಿಂದ ನೊಂದ ಶ್ರುತಿ ರೂಮ್ಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಿಥುನ್ ಮತ್ತು ಭಾಗ್ಯಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಶ್ರುತಿ ಸಹೋದರ ರಂಜಿತ್ ದೂರು ನೀಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.