400 ವರ್ಷಗಳ ಬಳಿಕದ ಕೌತುಕದ ಫೋಟೋ ಶೇರ್​ ಮಾಡಿದ ನಾಸಾ: ಶುರುವಾಗಿದೆ ಗುರು-ಶನಿ ಟ್ರೆಂಡ್​

NASA
Published on

ಬೆಂಗಳೂರು: 400 ವರ್ಷಗಳ ನಂತರ ನಿನ್ನೆ (ಸೋಮವಾರ-ಡಿ.21) ಆಕಾಶದಲ್ಲಿ ನಡೆದ ಅಚ್ಚರಿಯನ್ನು ಬಹುತೇಕ ಮಂದಿ ವೀಕ್ಷಣೆ ಮಾಡುತ್ತೀರಿ. ಅದು ಗುರು ಮತ್ತು ಶನಿಯ ‘ಮಹಾ ಸಂಯೋಗ’. ಈ ಎರಡೂ ಗ್ರಹಗಳು ಅತ್ಯಂತ ಸಮೀಪ ಬಂದಿರುವ ದೃಶ್ಯವಿದು.

ಎರಡು ಪ್ರಕಾಶಮಾನವಾದ ಗ್ರಹಗಳು ಒಟ್ಟಿಗೇ ಗೋಚರಿಸಿದ್ದು ಜನಸಾಮಾನ್ಯರಿಗೆ ಸಾಮಾನ್ಯ ಎನ್ನಿಸಿದ್ದರೂ ಖಗೋಳವಿಜ್ಞಾನಿಗಳಿಗೆ ಇದು ಅತ್ಯಂತ ಅಪರೂಪದ ವಿದ್ಯಮಾನವಾಗಿತ್ತು. ಗುರು ಮತ್ತು ಶನಿಗ್ರಹಗಳು ಅತ್ಯಂತ ಸಮೀಪಕ್ಕೆ ಬಂದಿದ್ದು, ಇದನ್ನು ವಿಜ್ಞಾನಿಗಳು ‘ಮಹಾ ಸಂಯೋಗ’ ಎಂದೇ ಕರೆದಿದ್ದಾರೆ.

ಈ ಎರಡೂ ಗ್ರಹಗಳು ಡಿಸೆಂಬರ್ 13ರಿಂದಲೇ ಸಮೀಪಿಸುತ್ತಿವೆ. ಅದರ ಅಂತರ ಇಂದು ಅತ್ಯಂತ ಕಡಿಮೆಯಾಗಿದ್ದು, ಅಂಥ ಅಪೂರ್ವ ನೋಟವನ್ನು ಬಹುತೇಕರು ಕಣ್ತುಂಬಿಸಿಕೊಂಡರು. ಇಂದಿನಿಂದ ಮತ್ತೆ ಈ ಎರಡೂ ಗ್ರಹಗಳು ದೂರ ದೂರ ಸರಿಯಲು ಆರಂಭಿಸುತ್ತವೆ.

ಇಂಥದ್ದೊಂದು ಅಪೂರ್ವದ ದೃಶ್ಯದ ಫೋಟೋವನ್ನು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಬಿಡುಗಡೆ ಮಾಡಿದೆ. ಇದರ ಜತೆಜತೆಗೆ ಈ ಗುರು-ಶನಿಯ ಸಂಯೋಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗಿದ್ದು, ತಾವು ಸೆರೆ ಹಿಡಿದಿರುವ ದೃಶ್ಯಗಳನ್ನು ಜನರು ಶೇರ್​ ಮಾಡತೊಡಗಿದ್ದಾರೆ.

ಏನಿದು ಸಂಯೋಗ?

ಗುರು ಮತ್ತು ಶನಿ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುತ್ತಿರುತ್ತವೆ. ಆದ್ದರಿಂದ ಎರಡೂ ಗ್ರಹಗಳು ಇದೀಗ ಪರಸ್ಪರ ಹಾದುಹೋಗಲಿವೆ. ಈ ಎರಡೂ ಗ್ರಹಗಳು ಪ್ರತಿ 20 ವರ್ಷಗಳಿಗೆ ಒಮ್ಮೆ ಹೀಗೆ ಪರಸ್ಪರ ಹಾದುಹೋಗಲಿವೆ. ಆದರೆ, ಈ ಬಾರಿ ಗುರು ಮತ್ತು ಶನಿ ಅತ್ಯಂತ ಹತ್ತಿರದಲ್ಲಿ ಭೂಮಿಯೂ ಹಾದುಹೋಗಲಿರುವ ಕಾರಣ, ಇಂಥದ್ದೊಂದು ವಿದ್ಯಮಾನ ನಡೆದಿದೆ ಎಂದಿರುವ ‘ನಾಸಾ’ದ ವಿಜ್ಞಾನಿಗಳು, ಮತ್ತೆ ಇಂಥದ್ದೊಂದು ದೃಶ್ಯಕ್ಕಾಗಿ 60 ವರ್ಷ ಕಾಯಬೇಕು ಎಂದಿದ್ದಾರೆ.

1610ರಲ್ಲಿ ಗೆಲಿಲಿಯೊ ಗೆಲಿಲಿ ಅವರು ತಮ್ಮ ದೂರದರ್ಶಕದ ಮೂಲಕ ಗುರುಗ್ರಹ ಮತ್ತು ಅದರ ನಾಲ್ಕು ಚಂದ್ರಗಳನ್ನು ಗುರುತಿಸಿದ್ದರು. 1623ರಲ್ಲಿ ಮತ್ತೊಮ್ಮೆ ಗುರುಗ್ರಹವನ್ನು ವೀಕ್ಷಿಸುವಾಗ ಶನಿಗ್ರಹವು ಅತ್ಯಂತ ಸಮೀಪದಲ್ಲಿ ಗೋಚರಿಸಿತ್ತು. ಆನಂತರ ಇಲ್ಲಿಯವರೆಗೆ ಇಂತಹ ವಿದ್ಯಮಾನ ಘಟಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net