

ನ್ಯೂಯಾರ್ಕ್: "ನೀವು ಅಂತಹ ಆರೋಪವನ್ನು ಮಾಡಲು ಕಾರಣವಿದ್ದರೆ ದಯವಿಟ್ಟು ಸಾಕ್ಷ್ಯವನ್ನು ಹಂಚಿಕೊಳ್ಳಿ ಏಕೆಂದರೆ ನಾವು ತನಿಖೆಯನ್ನು ತಳ್ಳಿಹಾಕುತ್ತಿಲ್ಲ" ಎಂದು ಅಮೆರಿಕಾಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೂಚಿಸಿದರು.
ಐದು ದಿನಗಳ ಅಧಿಕೃತ ಭೇಟಿಯಲ್ಲಿರುವ ಅವರು ಕೆನಡಾದ ಸಿಖ್ ಕಾರ್ಯಕರ್ತ ನಿಜ್ಜರ್ನ ಹತ್ಯೆಯ ತನಿಖೆಯನ್ನು ಭಾರತ ತಳ್ಳಿಹಾಕುವುದಿಲ್ಲ ಎಂದು ಹೇಳಿದರು.ರಾಜತಾಂತ್ರಿಕ ಬಿಕ್ಕಟ್ಟಿನ ಕುರಿತು ಜಸ್ಟಿನ್ ಟ್ರುಡೊ ನೀಡಿದ ತಾಜಾ ಹೇಳಿಕೆಯ ನಂತರ ಜೈಶಂಕರ್ ಅವರು ಭಾರತ-ಕೆನಡಾ ವಿವಾದದ ಕುರಿತು ಮಾತನಾಡಿದರು.
ನಿಜ್ಜರ್ ಹತ್ಯೆ ಯಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಕೆನಡಾ ಪುರಾವೆಗಳನ್ನು ಒದಗಿಸಬೇಕು ಎಂದು ಹೇಳಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಭಾರತ ಪ್ರತಿ ಹೆಜ್ಜೆ ಇಡುವಾಗಲೂ ಯೋಚಿಸುತ್ತದೆ. ಅದೇ ರೀತಿ ಭಾರತ ತನಿಖೆಯನ್ನು ತಳ್ಳಿಹಾಕುವುದಿಲ್ಲ, ಸಾಕ್ಷ್ಯಗಳನ್ನು ಹಂಚಿಕೊಳ್ಳಲು ಕೆನಡಾ ಮುಂದಾಗಬೇಕು ಎಂದರು.
ಲಂಡನ್ನಲ್ಲಿ ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಮಾತುಕತೆ ಮಧ್ಯೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕಳೆದ ವಾರ ಕೆನಡಾವು ಭಾರತದೊಂದಿಗಿನ ಹೋರಾಟವನ್ನು ಬಯಸುವುದಿಲ್ಲ, ಆದರೆ ದೊಡ್ಡ ದೇಶಗಳು ಕಾನೂನು ಉಲ್ಲಂಘಿಸಬಹುದಾದರೆ ಇಡೀ ಪ್ರಪಂಚ ಅಪಾಯಕ್ಕೆ ಸಿಲುಕಿಕೊಳ್ಳುತ್ತದೆ ಎಂದಿದ್ದರು.
ಇದಾದ ನಂತರ ಜೈಶಂಕರ್ ಅವರು ಭಾರತ-ಕೆನಡಾ ವಿವಾದದ ಕುರಿತು ಮಾತನಾಡಿದ್ದಾರೆ. ಹಿಂಸಾತ್ಮಕ ಮಾರ್ಗಗಳು ಸೇರಿದಂತೆ ಭಾರತದಿಂದ ಪ್ರತ್ಯೇಕತೆಯನ್ನು ಪ್ರತಿಪಾದಿಸುವ ಹಿಂಸಾತ್ಮಕ ಮತ್ತು ತೀವ್ರ ರಾಜಕೀಯ ಅಭಿಪ್ರಾಯಗಳಿಗೆ ಕೆನಡಾದ ರಾಜಕೀಯವು ಜಾಗವನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ. ಕೆನಡಾದ ರಾಜಕೀಯದಲ್ಲಿ ಈ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವರಿಗೆ ಸ್ವಾತಂತ್ರ್ಯವನ್ನು ನೀಡಲಾಗಿದೆ. ಭಾರತ ಹೈಕಮಿಷನ್ ಮೇಲೆ ದಾಳಿ ನಡೆದಾಗ ಕೆನಡಾದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಮತ್ತು ರಾಜತಾಂತ್ರಿಕರನ್ನು ದಾಖಲೆಯಲ್ಲಿ ಸಾರ್ವಜನಿಕವಾಗಿ ಬೆದರಿಸಲಾಯಿತು ಎಂದು ಜೈಶಂಕರ್ ಹೇಳಿದರು.
ಕೆನಡಾವನ್ನು ಹಿಂದಿನ ಇತಿಹಾಸ ಹೊಂದಿರುವ ದೇಶ ಎಂದು ಕರೆದ ಜೈಶಂಕರ್, ಏರ್ ಇಂಡಿಯಾ ವಿಮಾನದ ಮೇಲೆ ಬಾಂಬ್ ದಾಳಿಯನ್ನು ಉಲ್ಲೇಖಿಸಿ, "ನಾವು ಪ್ರಜಾಪ್ರಭುತ್ವ, ಅವರು ಸಹ ಪ್ರಜಾಪ್ರಭುತ್ವ. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದು ನಿರ್ದಿಷ್ಟ ಜವಾಬ್ದಾರಿಯೊಂದಿಗೆ ಬರುತ್ತದೆ. ಆ ಸ್ವಾತಂತ್ರ್ಯಗಳ ದುರುಪಯೋಗ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಆ ದುರುಪಯೋಗವನ್ನು ಸಹಿಸಿಕೊಳ್ಳುವುದು ತುಂಬಾ ತಪ್ಪು ಎಂದಿದ್ದಾರೆ.