

ಲಂಡನ್: ಈ ಚಿತ್ರದಲ್ಲಿ ಕಾಣುತ್ತಿರುವ ಮನೆ ಇರುವುದು ಲಂಡನ್ನಲ್ಲಿ. ಅಂದರೆ ಎರಡು ಮನೆಗಳ ನಡುವೆ ನೀಲಿ ಬಣ್ಣದಲ್ಲಿ ಕಾಣಿಸುತ್ತಿದೆಯಲ್ಲಾ ಆ ಮನೆಯ ಬಗ್ಗೆ ಹೇಳುತ್ತಿರುವುದು.
ಅತ್ತ ಕ್ಲಿನಿಕ್ ಇದ್ದು ಇತ್ತ ಸಲೂನ್ ಇದೆ. ನಡುವೆ ಈ ಪುಟ್ಟ ಮನೆಯಿದೆ. ಅದರ ಸೈಜ್ 5 ಅಡಿ 6 ಇಂಚು ಅಷ್ಟೇ. ಅಳತೆ ಇಷ್ಟು ಚಿಕ್ಕದಾಗಿದ್ದರೂ ಇದರಲ್ಲಿ ಐದು ಅಂತಸ್ತು ಇದೆ! 19ನೇ ಶತಮಾನದ ಕೊನೆಗೆ ಅಥವಾ 20ನೇ ಶತಮಾನದ ಶುರುವಿನಲ್ಲಿ ಈ ಕಟ್ಟಡದ ನಿರ್ಮಾಣ ಆಗಿದೆ.
ಮನೆ ಇಷ್ಟೇ ಪುಟ್ಟದಿದ್ದರೂ ಅದರಲ್ಲಿರುವ ವೈಶಿಷ್ಟ್ಯಗಳು ಅಷ್ಟಿಷ್ಟಲ್ಲ. ಫ್ರೆಂಚ್ ಶೈಲಿಯ ಕಿಟಕಿ ಹಿಂಭಾಗ ಹದಿನಾರು ಅಡಿ ಅಗಲದ ಉದ್ಯಾನ ಇದೆ. ಕೆಳಗಿನ ಅಂತಸ್ತಿನ ತುದಿಯಲ್ಲಿ ಇರುವ ಅಡುಗೆ ಮನೆ ಅತ್ಯಂತ ಕಿರಿದಾದ ಸ್ಥಳದಲ್ಲಿದೆ. ಅದರ ಎರಡರಷ್ಟು ಅಳತೆಯಲ್ಲಿ ತೆರೆದ ರೀತಿಯಲ್ಲಿ ಡೈನಿಂಗ್ ಪ್ರದೇಶ ಇದೆ. ನೆಲ ಮಹಡಿಯಲ್ಲಿ ರಿಸೆಪ್ಷನ್ ಇದೆ. ಅದೇ ಅಳತೆಯಲ್ಲೇ ಮೊದಲ ಅಂತಸ್ತು ಕೂಡ ಇದೆ. ಅಲ್ಲಿ ಮಲಗುವ ಕೋಣೆ ಹಾಗೂ ಓದುವ ಕೋಣೆ ಇದ್ದು, ಜತೆಗೆ ರೂಫ್ ಟೆರೇಸ್ ಕೂಡ ಇದೆ. ಪಶ್ಚಿಮ ಲಂಡನ್ ಚಿಮಣಿ ಸಹ ಇದೆ.
ಅಂದಹಾಗೆ ಇದು ವಿಕ್ಟೋರಿಯನ್ ಟೋಪಿ ಮಳಿಗೆ ಇದಾಗಿತ್ತು. ಇಷ್ಟು ವರ್ಷ ಗತಿಸಿದರೂ ಈ ಮನೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇವತ್ತಿಗೂ ಹಳೇ ಜಮಾನದಲ್ಲಿ ಹೇಗಿತ್ತೋ ಅದೇ ರೀತಿಯಲ್ಲಿ ಮಳಿಗೆ ಮುಂಭಾಗದ ಗಾಜು ಹಾಗೂ ಬೌಲರ್ ಟೋಪಿ ಆಕಾರದ ದೀಪ ಇದೆ.
ಶತಮಾನದಷ್ಟು ಹಳೆಯದಾಗಿರುವ, ಅಷ್ಟೇ ಪ್ರಸಿದ್ಧಿ ಹೊಂದಿರುವ, ಪಟ್ಟಣದ ನಡುಭಾಗದಲ್ಲಿ ಇರುವ ಅಷ್ಟೇ ಅಲ್ಲದೇ ಸಕಲ ಸೌಲಭ್ಯಗಳನ್ನೂ ಹೊಂದಿರುವ ಈ ಮನೆಗೆ ಬೆಲೆ ಎಷ್ಟು ಗೊತ್ತಾ? 1.3 ಮಿಲಿಯನ್ ಡಾಲರ್! ಅಂದರೆ ಭಾರತೀಯ ರೂಪಾಯಿಯ ಲೆಕ್ಕಾಚಾರದಲ್ಲಿ ಹೇಳುವುದಾದರೆ ಸುಮಾರು 9.50 ಕೋಟಿ ರೂಪಾಯಿ! ಲಂಡನ್ ಇತಿಹಾಸದಲ್ಲಿ ವಿಶಿಷ್ಟ ಭಾಗದಲ್ಲಿ ಇರುವುದರಿಂದ ಇಷ್ಟು ಮೊತ್ತಕ್ಕೆ ಈ ಕಟ್ಟಡ ಅರ್ಹವಿದೆ ಎನ್ನುತ್ತಾರೆ ಈ ಆಸ್ತಿಯನ್ನು ಮಾರಾಟ ಮಾಡುತ್ತಿರುವ ವಿಂಕ್ವರ್ತ್ ಸೇಲ್ಸ್ ಮ್ಯಾನೇಜರ್ ಡೇವಿಡ್ ಮೆಯಾರ್.