More

    ಅತ್ತೆ ಬ್ಲ್ಯಾಕ್​ಮೇಲ್​ ಮಾಡಿ ಮೃತ ಮಗನ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ- ಅವರಿಗೂ ಕೊಡಬೇಕಾ?

    ಅತ್ತೆ ಬ್ಲ್ಯಾಕ್​ಮೇಲ್​ ಮಾಡಿ ಮೃತ ಮಗನ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ- ಅವರಿಗೂ ಕೊಡಬೇಕಾ?ನನ್ನ ಮದುವೆ 2014ರಲ್ಲಿ ಆಯಿತು. ನನ್ನ ಗಂಡ ಸರ್ಕಾರಿ ಕೆಲಸದಲ್ಲಿ ಇದ್ದರು. ಮದುವೆ ಆದ ಎರಡು ವರ್ಷದ ನಂತರ ಅವರು ರಸ್ತೆ ಅಪಘಾತದಲ್ಲಿ ಮೃತರಾದರು. ಈಗ ನನಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಸಿಕ್ಕಿದೆ. ನಾನು ಬೇರೆ ಊರಿನಲ್ಲಿ ತಂದೆ ತಾಯಿ ಜತೆ ಇದ್ದೇನೆ. ನನಗೆ ಇಲಾಖೆಯಿಂದ ನನ್ನ ಗಂಡನ ಹೆಸರಿಗೆ ಬರಬೇಕಾದ ಇಪ್ಪತ್ತು ಲಕ್ಷ ರೂ. ಹಣ ಬಂದಿದೆ. ನನ್ನ ಗಂಡ ನಾಲ್ಕು ಎಲ್.ಐ.ಸಿ ಪಾಲಿಸಿ ಮಾಡಿದ್ದರು. ಅವಕ್ಕೆಲ್ಲ ನಮ್ಮ ಅತ್ತೆಯನ್ನು ನಾಮಿನಿ ಮಾಡಿದ್ದರು. ಅದರಿಂದ ಬಂದ ಪೂರ್ತಿ ಹತ್ತು ಲಕ್ಷ ಹಣವನ್ನು ಅವರೇ ತೆಗೆದುಕೊಂಡಿದ್ದಾರೆ.

    ಅತ್ತೆಗೆ ಅವರ ಗಂಡನ ಪಿಂಚಣಿ ಹಣ ಇಪ್ಪತ್ತೊಂದು ಸಾವಿರ ಬರುತ್ತೆ. ಪಿತ್ರಾರ್ಜಿತ ಆಸ್ತಿಯೂ ಇದೆ. ಅವರು ತಮ್ಮ ಮೊದಲ ಮಗನ ಮನೆಯಲ್ಲಿ ಇದ್ದಾರೆ. ಈಗ ನನ್ನ ಅತ್ತೆ ನನ್ನನ್ನು ಬ್ಲಾಕ್​ಮೇಲ್ ಮಾಡುತ್ತಿದ್ದಾರೆ. ಸರ್ಕಾರದಿಂದ ಬಂದ ಹಣದಲ್ಲಿ ಅರ್ಧ ಹಣ ಕೊಡು ಎನ್ನುತ್ತಿದ್ದಾರೆ. ಇಲ್ಲದಿದ್ದರೆ ಕೇಸು ಹಾಕಿ ನಿನ್ನ ಸಂಬಳದಲ್ಲಿ ಕಟಿಂಗ್ ಮಾಡಿಸುತ್ತೇನೆ ಎಂದು ಬೆದರಿಸುತ್ತಿದ್ದಾರೆ. ನೀನು ಎರಡನೇ ಮದುವೆ ಹೇಗೆ ಆಗುತ್ತಿಯಾ ನೋಡುತ್ತೇನೆ ಎನ್ನುತ್ತಿದ್ದಾರೆ. ನಾನು ಅವರಿಗೆ ಎಲ್.ಐ.ಸಿಯಿಂದ ಹೋಗಿರುವ ಹಣ ವಾಪಸ್ ಪಡೆಯಬಹುದೇ? ನಾನು ಇನ್ನೊಂದು ಮದುವೆ ಆಗಬಹುದೇ?

    ಉತ್ತರ: ಮೃತ ಹಿಂದೂ ಪುರುಷನ ಎಲ್ಲ ಆಸ್ತಿಗಳೂ ಅವನ ಮರಣಾನಂತರ ಆತನ ಪತ್ನಿ, ತಾಯಿ ಮತ್ತು ಮಕ್ಕಳಿಗೆ ಸಮವಾಗಿ ಹಂಚಿಕೆಯಾಗುತ್ತವೆ. ನಿಮಗೆ ಮಕ್ಕಳಿಲ್ಲದೆ ಇರುವುದರಿಂದ, ನಿಮ್ಮ ಮೃತ ಪತಿಯ ಎಲ್ಲ ಚರ ಸ್ಥಿರ ಆಸ್ತಿಯಲ್ಲಿ ನಿಮಗೂ ನಿಮ್ಮ ಅತ್ತೆಗೂ ಸಮಪಾಲು ಇರುತ್ತದೆ. ನಿಮ್ಮ ಅತ್ತೆಗೆ ಬೇರೆ ಆಸ್ತಿ ಇದ್ದರೂ, ಪಿಂಚಣಿ ಬರುತ್ತಿದ್ದರೂ ಅವರಿಗೆ ಮೃತ ಮಗನ ಆಸ್ತಿಯಲ್ಲಿ ಸೊಸೆಗೆ ಇರುವಷ್ಟೇ ಹಕ್ಕು ಇರುತ್ತದೆ. ಇನ್ನು ಎಲ್ ಐ.ಸಿಯಲ್ಲಿ ನಿಮ್ಮ ಅತ್ತೆಯ ಹೆಸರನ್ನು ನಾಮಿನಿಯಾಗಿ ತೋರಿಸಿದ ಮಾತ್ರಕ್ಕೆ ಆ ಇಡೀ ಮೊತ್ತ ನಿಮ್ಮ ಅತ್ತೆಯದೇ ಆಗುವುದಿಲ್ಲ.

    ಅದರಲ್ಲಿ ಅರ್ಧ ಭಾಗ ನಿಮಗೂ ಬರಬೇಕು. ಹಾಗೆಯೇ ನಿಮ್ಮ ಪತಿಯ ಮರಣಾನಂತರ ನಿಮಗೆ ಬಂದ ಕೆಲವು (ಹೆಡ್ಸ್​ನ) ಭಾಗದ ಹಣದಲ್ಲಿ ನಿಮ್ಮ ಅತ್ತೆಗೂ ಅರ್ಧ ಭಾಗ ಇರುತ್ತದೆ. ನಿಮ್ಮ ಮೃತ ಪತಿಯ ಪಿತ್ರಾರ್ಜಿತ ಆಸ್ತಿಯಲ್ಲೂ ನಿಮಗೆ ಅತ್ತೆಯ ಜತೆಗೆ ಸಮಭಾಗ ಇದ್ದೇ ಇರುತ್ತದೆ. ಹೀಗಾಗಿ ನೀವಿಬ್ಬರೂ ಕೂತು ಮಾತಾಡಿ ಸಮಸ್ಯೆ ಪರಿಹರಿಸಿಕೊಳ್ಳುವುದು ಒಳ್ಳೆಯದು. ಅವರು ಕೇಸು ಹಾಕಿದರೆ ನೀವು ಹೆದರಬೇಡಿ. ನೀವೂ ಕೌಂಟರ್ ಕ್ಲೇಮ್ ಮಾಡಬಹುದು. ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳುಹಿಸಿಕೊಡಲು ನ್ಯಾಯಾಲಯವನ್ನು ಕೇಳಿಕೊಳ್ಳಿ. ಅಲ್ಲಿ ನೀವಿಬ್ಬರೂ ಮಧ್ಯಸ್ಥಿಕೆಗಾರರ ಸಹಾಯದಿಂದ ರಾಜಿ ಸೂತ್ರಕ್ಕೆ ಒಪ್ಪಬಹುದು. ನಿಮ್ಮ ಅತ್ತೆ ಒಪ್ಪದಿದ್ದರೆ ಚಿಂತಿಸಬೇಡಿ. ಕಾನೂನು ಪ್ರಕಾರ ಎಷ್ಟು ಬರಬೇಕೋ ಅದನ್ನು ಕೊಡಲು ಮತ್ತು ಸ್ವೀಕರಿಸಲು ನಾನು ಸಿದ್ಧ ಎಂದು ಹೇಳಿಕೆಯನ್ನು ನ್ಯಾಯಾಲಯದಲ್ಲಿ ಕೊಡಬಹುದು.

    ನಿಮ್ಮ ಪತಿ ಕೆಲಸ ಮಾಡುತ್ತಿದ್ದ ಇಲಾಖೆಯವರನ್ನೂ ಪಾರ್ಟಿ ಮಾಡಬೇಕೆಂದು ಕೇಳಿಕೊಳ್ಳಬಹುದು. ಇಲಾಖಾ ನಿಯಮವನ್ನೂ, ವಾರಸಾ ಕಾಯ್ದೆಯನ್ನೂ ಪರಿಗಣಿಸಿ ನ್ಯಾಯಾಲಯ ತೀರ್ಪು ಕೊಡುತ್ತದೆ. ನೀವು ಹೆದರಬೇಕಾಗಿಲ್ಲ. ಇನ್ನು ನೀವು ಮರುಮದುವೆ ಆಗುವ ವಿಷಯದಲ್ಲಿ ಹೆದರಬೇಕಾಗಿಲ್ಲ. ಅದು ನಿಮ್ಮ ವೈಯಕ್ತಿಕ ನಿರ್ಧಾರ. ಯಾರೂ ಅಡ್ಡಿ ಬರುವಂತಿಲ್ಲ. ನಿಮಗೆ ಇಷ್ಟವಿದ್ದರೆ ಖಂಡಿತವಾಗಿ ಮರುಮದುವೆ ಆಗಬಹುದು.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ   https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ದೊಡ್ಡಪ್ಪನಿಗೆ ಮಕ್ಕಳಿಲ್ಲ- ಅವರನ್ನು ನೋಡಿಕೊಂಡ ನಮಗೆ ಆಸ್ತಿ ಸಿಗುತ್ತಾ ಅಥವಾ ಸಾಕುಮಗನಿಗೆ ಹೋಗುತ್ತಾ?

    ತಂದೆಯವರು ದಾನಪತ್ರದ ಮೂಲಕ ನೀಡಿರುವ ಮುತ್ತಜ್ಜಿ ಆಸ್ತಿಯಲ್ಲಿ ಅಣ್ಣನಿಗೂ ಪಾಲಿದೆಯೆ?

    ತಂದೆಯವರು ದಾನಪತ್ರದ ಮೂಲಕ ನೀಡಿರುವ ಮುತ್ತಜ್ಜಿ ಆಸ್ತಿಯಲ್ಲಿ ಅಣ್ಣನಿಗೂ ಪಾಲಿದೆಯೆ?

    ಅಜ್ಜನ ಆಸ್ತಿ ನನಗೆ ಸಿಕ್ಕಿದೆ, ತಂಗಿಯಂದಿರಿಗೂ ಇದರಲ್ಲಿ ಪಾಲು ಇದೆಯೆ?

    ನನ್ನ ಸಹಿ ಇಲ್ಲದೇ ಅಣ್ಣ-ಅಮ್ಮ ಹೊಲ ಮಾರಿದ್ದಾರೆ; ಆಸ್ತಿ ಸಿಗಲು ನಾನೇನು ಮಾಡಬೇಕು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts