

ಇಂದೋರ್ (ಮಧ್ಯಪ್ರದೇಶ): ಮಲಗಿದಾಗ ಸುಂದರ ಕನಸನ್ನು ಕಂಡಾಗ ಮನಸ್ಸು ದಿನಪೂರ್ತಿ ಅಹ್ಲಾದವಾಗಿರುತ್ತದೆ, ಅದೇ ರೀತಿ ಕೆಟ್ಟ ಕನಸು ಕಂಡಾಗ ಮೂಡ್ ಆಫ್ ಆಗಿರುತ್ತದೆ. ನಮಗೆ ಬಿದ್ದದ್ದು ಕನಸು ಮಾತ್ರ, ಅದು ನನಸಲ್ಲ ಎಂದು ತಿಳಿದರೂ ಅದರ ಮೇಲೆಯೇ ಆ ದಿನದ ನಮ್ಮ ಮೂಡ್ ಕೆಲವೊಮ್ಮೆ ನಿರ್ಧರಿತವಾಗಿರುತ್ತದೆ.
ಅದೇ ರೀತಿ, ಕೆಲವೊಮ್ಮೆ ಕನಸು ಕಾಣುತ್ತಿರುವಾಗ ನಗುವುದು, ಅಳುವುದು, ಹೆದರುವುದು ಎಲ್ಲವೂ ನಡೆದಿರುತ್ತದೆ. ಇನ್ನು ಕೆಲವೊಮ್ಮೆ ಕನಸು ಕಾಣುತ್ತಲೇ ನಮ್ಮ ಅರಿವಿಗೆ ಬಾರದೇ ಹೊಡೆಯುವುದು, ಚಿವುಟುವುದು, ಬೈಯುವುದನ್ನು ಮಾಡುತ್ತಿರುತ್ತೇವೆ. ಇವೆಲ್ಲಾ ಓಕೆ. ಆದರೆ ಮಧ್ಯಪ್ರದೇಶ ಘನಾದ ಅಸ್ಸಿನ್ ಫೋಸು ಎಂಬಲ್ಲಿ ನಡೆದಿರುವ ಘಟನೆ ಮಾತ್ರ ಶಾಕಿಂಗ್ ಆಗಿರುವಂಥದ್ದು.
ಅದೇನೆಂದರೆ ಸುಂದರವಾಗಿರುವ ಕನಸನ್ನು ಕಂಡ ಕೋಫಿ ಅಟ್ಟಾ ಎಂಬ ವ್ಯಕ್ತಿಯೊಬ್ಬ ತನ್ನ ಮರ್ಮಾಂಗವನ್ನೇ ಕಟ್ ಮಾಡಿಕೊಂಡಿದ್ದಾನೆ! ಅಷ್ಟಕ್ಕೂ ಆತ ಕಂಡಿರುವ ಕನಸು ಎಂದರೆ ಮಾಂಸದೂಟವನ್ನು ಸವಿಯುತ್ತಿರುವುದು! ಮಾಂಸದೂಟ ಸವಿಯುವ ಕನಸು ಕಾಣುತ್ತಿರುವಾಗ ಮರ್ಮಾಂಗಕ್ಕೆ ಕತ್ತರಿ ಬಿದ್ದದ್ದು ಹೇಗೆ ಎಂದರೆ, ಈತನಿಗೆ ಮೇಕೆ ತಿನ್ನುವ ಆಸೆಯಾಗಿತ್ತಂತೆ. ಅದನ್ನೇ ಕನಸಿನಲ್ಲಿಯೂ ಕಂಡಿದ್ದಾನೆ.
ಕೋಫಿ ಅಟ್ಟಾ ಮಾರುಕಟ್ಟೆಯಿಂದ ಮೇಕೆ ಖರೀದಿ ಮಾಡಿದಂತೆ ಕನಸು ಕಂಡಿದ್ದಾನೆ. ನಂತರ ಆ ಮೇಕೆಯನ್ನು ಕಟ್ ಮಾಡುತ್ತಿರುವಂತೆ ಕನಸು ಕಂಡಿದ್ದಾನೆ. ಅವನಿಗೆ ಅರಿವೇ ಇಲ್ಲದೇ ಎದ್ದು ಚಾಕು ತಂದಿದ್ದಾನೆ. ಮೇಕೆಯನ್ನು ಕಟ್ ಮಾಡಿದಂತೆ ಭಾವಿಸಿದ ಆತ ತನ್ನ ಮರ್ಮಾಂಗನ್ನೇ ಕಟ್ ಮಾಡಿಕೊಂಡಿದ್ದಾನೆ.
ನಿದ್ದೆಯಿಂದ ಎಚ್ಚರ ಆಗುತ್ತಿದ್ದಂತೆಯೇ ತೀವ್ರ ರಕ್ತಸ್ರಾವ ಉಂಟಾಗಿರುವುದನ್ನು ನೋಡಿದ್ದಾನೆ. ಕೂಡಲೇ ನೋವಿನಿಂದ ಕಿರುಚಿಕೊಂಡ ಆತನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಇದರ ಕಾರಣ ಕೇಳಿ ಶಾಕ್ ಆಗಿದ್ದಾರೆ.
ಕೋಫಿ ಅಟ್ಟಾ ಹೇಳಿದ್ದೇನೆಂದರೆ, ನಾನು ನಿದ್ರಿಸಿದ್ದಾಗ ಕುರ್ಚಿಯಲ್ಲಿ ಕುಳಿತಿದ್ದೆ. ನಾನು ಮೇಕೆಯನ್ನು ಕತ್ತರಿಸುತ್ತಿದ್ದೇನೆ ಎಂದು ಕನಸು ಕಂಡೆ, ಆದರೆ ನನ್ನ ಜನನಾಂಗಕ್ಕೆ ಹೇಗೆ ಚಾಕು ಹಾಕಿಕೊಂಡೆ, ಚಾಕು ಹೇಗೆ ತಂದೆ ಎಂಬ ನೆನಪು ಇಲ್ಲ ಎಂದು ಹೇಳಿಕೊಂಡಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆಗೆ ಸಕಲ ಸಿದ್ಧತೆ ನಡೆಸಲಾಗಿದೆ. (ಏಜೆನ್ಸೀಸ್)