ಹಾಥರಸ್​ ರೇಪ್​ ಕೇಸ್​: ಸರ್ಕಾರದ ವಿರುದ್ಧ ನುಡಿದರೆ ₹50 ಲಕ್ಷ ಗಿಫ್ಟ್​! ಪತ್ರಕರ್ತೆಯಿಂದಲೂ ಪಿತೂರಿ?

hathras-gift
Published on

ಲಖನೌ: ಹಾಥರಸ್ ಅತ್ಯಾಚಾರದ ಕೇಸಿನ ಆಳ ಬಗೆದಷ್ಟೂ ಬರೀ ಕುತೂಹಲಗಳೇ ತುಂಬಿಕೊಂಡಿವೆ. ಉತ್ತರ ಸಿಗದ ಹಲವು ಪ್ರಶ್ನೆಗಳು ತುಂಬಿ ಹೋಗಿವೆ. ಸತ್ಯಾಸತ್ಯತೆ ಅಂತಿಮವಾಗಿ ಹೊರಕ್ಕೆ ಬರುವವರೆಗೂ ಈ ಪ್ರಕರಣವೊಂದು ಚಕ್ರವ್ಯೂಹದಂತೆಯೇ ಗೋಚರಿಸುತ್ತಿದೆ.

ಉತ್ತರ ಪ್ರದೇಶದಲ್ಲಿ ಸಿಎಎ ಮಾದರಿಯ ಹಿಂಸಾಚಾರಕ್ಕೆ ಸಂಚು ರೂಪಿಸಲಾಗಿದೆ ಎಂಬ ಆರೋಪಗಳು ಇದಾಗಲೇ ಕೇಳಿ ಬಂದಿವೆ.

ಇದಕ್ಕೆ ಪೂರಕ ಎಂಬಂತೆ ಉತ್ತರ ಪ್ರದೇಶದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲು ಮಾಡಿರುವ ಎಫ್​ಐಆರ್​ನಲ್ಲಿ ಉಲ್ಲೇಖ ಮಾಡಿರುವ ಕೆಲವು ಅಂಶಗಳು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ಸುಳ್ಳು ಹೇಳಲು ಹಾಥರಸ್​ ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂಪಾಯಿ ಆಮಿಷವೊಡ್ಡಲಾಗಿದೆ ಎಂಬ ಭಯಾನಕ ಮಾಹಿತಿಯನ್ನು ಪೊಲೀಸರು ಎಫ್​ಐಆರ್​ನಲ್ಲಿ ದಾಖಲು ಮಾಡಿದ್ದಾರೆ. ಆದರೆ ಈ ರೀತಿ ಆಮಿಷ ಒಡ್ಡಿದವರು ಯಾರು ಎಂಬ ಬಗ್ಗೆ ಬಹಿರಂಗಪಡಿಸಿಲ್ಲ.

ಹಾಥರಸ್​ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ನೀಡಿರುವ ದೂರಿನ ಆಧಾರದ ಮೇಲೆ ಈ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಸಂಚು ಅಡಗಿದೆ. ರಾಜ್ಯ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲೂ ಸಿಎಂ ವಿರುದ್ಧದ ಅನೇಕ ಸಂದೇಶಗಳನ್ನು ಹರಿಬಿಡಲಾಗಿತ್ತು ಎಂದು ಅದರಲ್ಲಿ ಹೇಳಲಾಗಿದೆ.

ಅಷ್ಟೇ ಅಲ್ಲದೇ.  ಪತ್ರಕರ್ತೆಯೊಬ್ಬರು ಸಂತ್ರಸ್ತೆಯ ಸಹೋದರನನ್ನು ಸಂಪರ್ಕಿಸಿದ್ದಾರೆ. ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ನನಗೂ ತೃಪ್ತಿ ಇಲ್ಲ ಎಂದಿರುವ ಆಕೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಹೇಳಿಕೆ ನೀಡುವಂತೆ ಸಹೋದರನಿಗೆ ಪ್ರಚೋದನೆ ನೀಡುವ ಕೆಲಸ ಮಾಡಿದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ವ್ಯವಸ್ಥಿತ ಪಿತೂರಿಗಳು ನಡೆಯುತ್ತಿದ್ದು, ಸೂಕ್ತ ತನಿಖೆಗೆ ಗುರಿಪಡಿಸಿ ಸತ್ಯವನ್ನು ಬಯಲು ಮಾಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net