

ಲಖನೌ: ಉತ್ತರ ಪ್ರದೇಶದ ಹಾಥರಸ್ನಲ್ಲಿ 19 ವರ್ಷದ ಯುವತಿಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣ ಕ್ಷಣ ಕ್ಷಣಕ್ಕೂ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಸಾಗಿದೆ.
ಇದೀಗ ಅದೇ ಗ್ರಾಮದ ಮುಖಂಡರೊಬ್ಬರು ಸ್ಫೋಟಕ ಮಾಹಿತಿಯನ್ನು ನೀಡಿದ್ದು, ಇದೀಗ ಇಡೀ ಪ್ರಕರಣವನ್ನು ಬೇರೆ ದಿಕ್ಕಿನತ್ತ ನೋಡುವಂತೆ ಮಾಡಿದೆ.
ಅದೇನೆಂದರೆ "ಮೃತಪಟ್ಟಿರುವ ಯುವತಿ ಮತ್ತು ಪ್ರಮುಖ ಆರೋಪಿ (ಸಂದೀಪ್ ಸಿಂಗ್) ನಿರಂತರ ಸಂಪರ್ಕದಲ್ಲಿದ್ದರು. ಇವರ ಸಂಬಂಧದ ಬಗ್ಗೆ ಯುವತಿಯ ಕುಟುಂಬದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಇವರಿಬ್ಬರ ಸ್ನೇಹದ ಬಗ್ಗೆ ಯುವತಿಯ ಕುಟುಂಬದವರು ಆಕ್ಷೇಪ ಎತ್ತಿದ್ದರು.
ಆದರೂ ಇವರಿಬ್ಬರ ಸಂಪರ್ಕ ಮುಂದುವರೆದಿತ್ತು. ಆ ಆರೋಪಿ ಯುವಕನೇ ಯುವತಿಯನ್ನು ಭೇಟಿಯಾಗಲು ಹೋಗಿದ್ದ. ಈ ಸಮಯದಲ್ಲಿ ಸಂತ್ರಸ್ತೆಯ ಕುಟುಂಬದವರೇ ಆಕೆಯ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆಗಳು ಇದ್ದು, ಇದರಿಂದ ಆಕೆಗೆ ಗಂಭೀರ ಗಾಯಗಳಾಗಿರಬಹುದು" ಎಂದಿದ್ದಾರೆ ಗ್ರಾಮದ ಮುಖ್ಯಸ್ಥ.
ಇದಕ್ಕೆ ಪುಷ್ಟಿ ನೀಡಲು ಎಂಬಂತೆ ಮೃತಪಟ್ಟ ಯುವತಿ ಮತ್ತು ಸಂದೀಪ್ ಸಿಂಗ್ ನಡುವೆ ಕಳೆದ ಒಂದು ವರ್ಷದಲ್ಲಿ 104 ಬಾರಿ ಮೊಬೈಲ್ ಕರೆಗಳು ಬಂದಿರುವುದನ್ನು ಪೊಲೀಸರು ಟ್ರ್ಯಾಕ್ ಮಾಡಿದ್ದಾರೆ- ಇದರ ವಿವರಗಳಿಗೆ ಇದನ್ನು ಕ್ಲಿಕ್ ಮಾಡಿ: ಹಾಥರಸ್ ರೇಪ್ ಕೇಸ್ಗೆ ಭಾರಿ ಟ್ವಿಸ್ಟ್: ಆರೋಪಿಯೊಂದಿಗೆ 104 ಬಾರಿ ಫೋನ್ಕಾಲ್ ಮಾಡಿದ್ದ ಯುವತಿ!
ಈ ಹಿನ್ನೆಲೆಯಲ್ಲಿ ಈಗ ಇದು ಅತ್ಯಾಚಾರವೋ, ಕೊಲೆಯೋ ಎಂಬ ಬಗ್ಗೆ ತೀವ್ರ ಅನುಮಾನ ಹುಟ್ಟುಹಾಕಿದೆ. ಅದೇ ಇನ್ನೊಂದೆಡೆ, ಈ ಪ್ರಕರಣದ ಕುರಿತಂತೆ ದೇಶವ್ಯಾಪಿ ಪ್ರತಿಭಟನೆ ಜೋರಾಗಿದೆ.
ಯುವತಿಯ ಅಣ್ಣನಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸತ್ಯಾಂಶಗಳು ಗೊತ್ತಿರುವ ಹಿನ್ನೆಲೆಯಲ್ಲಿ, ಆತನನ್ನು ಮೊದಲು ಪ್ರಶ್ನೆಗೆ ಒಳಪಡಿಸಬೇಕು ಎಂದು ನಿನ್ನೆ ಬಿಜೆಪಿ ಮುಖಂಡ ಅಮಿತ್ ಮಾಲ್ವಿಯಾ ಹೇಳಿರುವುದು ಇಲ್ಲಿ ಉಲ್ಲೇಖಾರ್ಹ.