

ಅಹಮದಾಬಾದ್: ಗುಜರಾತ್ನ ಪ್ರಭಾವಿ ಪಟೇಲ್ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ (28) ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿಯೇ ಭಾರಿ ಕುತೂಹಲಕ್ಕೆ ಕಾರಣವಾಗಿದ್ದರೆ, ಅವರ ರಾಜೀನಾಮೆ ಪತ್ರದಲ್ಲಿ ಇರುವ ಕೆಲವು ಅಂಶಗಳು ಕಾಂಗ್ರೆಸ್‌ಗೆ ಭಾರಿ ಮುಜುಗರವನ್ನುಂಟು ಮಾಡುವಂತಿದೆ.
2015ರಲ್ಲಿ ಗುಜರಾತ್ನಲ್ಲಿ ಪಟೇಲ್ ಸಮುದಾಯದ ಮೀಸಲಾತಿ ಚಳವಳಿ ಮುನ್ನಡೆಸುವ ಮೂಲಕ ಮುನ್ನೆಲೆಗೆ ಬಂದಿದ್ದರು. 2019ರಲ್ಲಿ ಕಾಂಗ್ರೆಸ್‌ನ ರಾಷ್ಟ್ರನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಪ್ರಭಾವಿ ಯುವ ನಾಯಕ ಎಂದೇ ಗುರುತಿಸಿಕೊಂಡಿದ್ದ ಹಾರ್ದಿಕ್ ಪಟೇಲ್ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗುತ್ತಿದೆ. ಇದಕ್ಕೆ ಕಾರಣ ಅವರು ತಮ್ಮ ಸುದೀರ್ಘ ರಾಜೀನಾಮೆ ಪತ್ರದಲ್ಲಿ ಬರೆದಿರುವ ಕೆಲವು ವಿಷಯಗಳು.
ನಮ್ಮ ದೇಶವು ಸವಾಲುಗಳನ್ನು ಎದುರಿಸುತ್ತಿದ್ದಾಗ, ಕಾಂಗ್ರೆಸ್‌ಗೆ ನಾಯಕತ್ವದ ಅಗತ್ಯವಿದ್ದಾಗ, ಕಾಂಗ್ರೆಸ್ ನಾಯಕರು ವಿದೇಶದಲ್ಲಿ ಆನಂದಿಸುತ್ತಿದ್ದರು ಎಂದು ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪರೋಕ್ಷವಾಗಿ ತಿವಿದಿದ್ದಾರೆ.
ಕಾಂಗ್ರೆಸ್ ಸರಿಯಾದ ಮಾರ್ಗಸೂಚಿಗಳನ್ನು ಹೊಂದಿಲ್ಲ. ಯಾವುದೇ ವಿಷಯಗಳನ್ನು ಇಲ್ಲಿನ ನಾಯಕರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅದರಲ್ಲಿಯೂ ಗುಜರಾತ್ ಮತ್ತು ಗುಜರಾತಿಗಳನ್ನು ಕಂಡರೆ ಅವರಿಗೆ ದ್ವೇಷ ಎಂದು ಹಾರ್ದಿಕ್ ಕಿಡಿ ಕಾರಿದ್ದಾರೆ.
ಪಕ್ಷದ ಸಭೆಯಲ್ಲಿ ಭಾಗವಹಿಸಲು ಮತ್ತು ಸಮಸ್ಯೆಗಳನ್ನು ಚರ್ಚಿಸಲು ಬಿಜೆಪಿಯ ಕಾರ್ಯಕರ್ತರು 500-600 ಕಿಲೋಮೀಟರ್ ಪ್ರಯಾಣಿಸುತ್ತಿದ್ದರೆ, ಕಾಂಗ್ರೆಸ್‌ನ ಕೆಲವು ನಾಯಕರು ದೆಹಲಿಯ ಕೆಲವು ಹಿರಿಯ ಕಾಂಗ್ರೆಸ್ ನಾಯಕರಿಗೆ ಸಮಯಕ್ಕೆ ಸರಿಯಾಗಿ ಚಿಕನ್ ಸ್ಯಾಂಡ್‌ವಿಚ್ ಸಿಕ್ಕಿತೇ ಎಂದು ಖಚಿತಪಡಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿ, ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿ ರದ್ದತಿಯಾಗಲಿ, ಜಿಎಸ್‌ಟಿಯ ಅನುಷ್ಠಾನವಾಗಲಿ ಇವೆಲ್ಲವೂ ಭಾರತಕ್ಕೆ ಅಗತ್ಯ ಇರುವಂಥದ್ದು. ಭಾರತ ಸದಾ ಈ ಬದಲಾವಣೆಯನ್ನು ಬಯಸಿತ್ತು. ಭಾರತ ಸುದೀರ್ಘವಾಗಿ ಬಯಸಿದ್ದ ಪರಿಹಾರ ನಿಜಕ್ಕೂ ಸಿಕ್ಕಿದೆ. ಆದರೆ ಕಾಂಗ್ರೆಸ್‌ಗೆ ಅದ್ಯಾವುವೂ ಬೇಕಾಗಿರಲಿಲ್ಲ. ಆಡಳಿತ ಪಕ್ಷ ಏನು ಮಾಡಿದರೂ ಅದಕ್ಕೆ ಅಡ್ಡಗಾಲು ಹಾಕುವುದೇ ತನ್ನ ಕೆಲಸದಂತೆ ವರ್ತಿಸಿತು. ಈ ಎಲ್ಲಾ ಮಹತ್ವದ ವಿಚಾರಗಳಲ್ಲಿ ರಸ್ತೆ ತಡೆ ಮಾಡಿ, ಅಡ್ಡಗಾಲು ಹಾಕಲು ಪ್ರಯತ್ನಿಸಿತು. ಇವೆಲ್ಲವೂ ಕಾಂಗ್ರೆಸ್ ಇಂದು ಈ ಸ್ಥಿತಿಗೆ ಬರಲು ಕಾರಣ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಭಾರತ, ಗುಜರಾತ್ ಮತ್ತು ನನ್ನ ಪಾಟಿದಾರ್ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಜಿ ನೇತೃತ್ವದ ಭಾರತ ಸರ್ಕಾರ ಏನೇ ಮಾಡಿದರೂ ಅದನ್ನು ವಿರೋಧಿಸುವುದು ಕಾಂಗ್ರೆಸ್‌ನ ಏಕೈಕ ನಿಲುವಾಗಿತ್ತು. ಇವೆಲ್ಲಾ ಕಾರಣಗಳಿಂದಲೇ ಪ್ರತಿಯೊಂದು ರಾಜ್ಯದಲ್ಲೂ ಕಾಂಗ್ರೆಸ್ ತಿರಸ್ಕರಿಸಲ್ಪಟ್ಟಿದೆ. ಏಕೆಂದರೆ ಪಕ್ಷ ಮತ್ತು ಅದರ ನಾಯಕತ್ವವು ಜನರಿಗೆ ಮೂಲಭೂತ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ ಹಾರ್ದಿಕ್.