ಗನ್‌ ಜತೆ ಸೆಲ್ಫಿ ಆಸೆಪಟ್ಟು ಹೆಣವಾದ ನವವಿವಾಹಿತೆ: ಫೋನ್‌ ಬಟನ್‌ ಬದ್ಲು ಟ್ರಿಗರ್‌ ಒತ್ತಿ ಅನಾಹುತ!

selfe
Published on

ಲಖನೌ: ಸೆಲ್ಫಿ ತೆಗೆದುಕೊಳ್ಳುವಾಗ ಮಹಿಳೆ ಅಚಾನಕ್ಕಾಗಿ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.

26 ವರ್ಷದ ನವ ವಿವಾಹಿತೆ ರಾಧಿಕಾ ಗುಪ್ತಾ ಮೃತಪಟ್ಟವರು. ತಮ್ಮ ಮಾವನ ಸಿಂಗಲ್ ಬ್ಯಾರಲ್ ಗನ್ ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಅಚಾನಕ್ಕಾಗಿ ಗುಂಡು ಹಾರಿಬಿಟ್ಟಿದೆ. ಸೆಲ್ಫಿಗಾಗಿ ಕ್ಲಿಕ್‌ ಮಾಡಲು ಹೋಗಿ ಗನ್‌ ಟ್ರಿಗರ್‌ ಒತ್ತಿಬಿಟ್ಟಿದ್ದಾರೆ. ಗನ್ ಲೋಡ್ ಆಗಿದ್ದು, ಇದು ಅವರಿಗೆ ತಿಳಿದಿರಲಿಲ್ಲ. ಇದರಿಂದಾಗಿ ಗುಂಡು ಹಾರಿದೆ.

ಗುಂಡು ಅವರ ಗಂಟಲು ಹೊಕ್ಕಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಇವರ ವಿವಾಹ ಆಕಾಶ್‌ ಅವರ ಜತೆ ಕಳೆದ ಮೇ ತಿಂಗಳಿನಲ್ಲಿ ಆಗಿತ್ತು. ಇದು ಲೈಸೆನ್ಸ್‌ ಇರುವ ಗನ್‌, ಪಂಚಾಯಿತಿ ಚುನಾವಣೆ ವೇಳೆ ಇದನ್ನು ನಾವು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದ್ದೆವು. ಆದರೆ ಮೊನ್ನೆಯಷ್ಟೇ ಇದನ್ನು ಮಗ ವಾಪಸ್‌ ತಂದಿದ್ದ. ಮಹಡಿಯ ಮೇಲೆ ಇಟ್ಟಿದ್ದೆವು. ಇದನ್ನು ಹಿಡಿದು ರಾಧಿಕಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಅಚಾತುರ್ಯವಾಗಿದೆ ಎಂದು ಮಾವ ರಾಜೇಶ್ ಗುಪ್ತಾ ವಿವರಿಸಿದ್ದಾರೆ.

ಪತ್ನಿ ರಾಧಿಕಾ ಗನ್‌ ನೋಡಬೇಕೆಂದು ಹಠ ಹಿಡಿದಿದ್ದರು. ಇದರ ಜತೆ ಹಲವು ಫೋಟೋ ಕೂಡ ತೆಗೆಸಿಕೊಂಡಿದ್ದಳು. ಸೆಲ್ಫಿ ತೆಗೆದುಕೊಳ್ಳುವಾಗ ಟ್ರಿಗರ್ ಒತ್ತಿದ್ದು, ಬಳಿಕ ಗುಂಡು ಹಾರಿದೆ ಎಂದು ಪತಿ ಆಕಾಶ್‌ ಹೇಳಿದ್ದಾರೆ. ಆದರೂ ಪೊಲೀಸರು ಇದು ಆತ್ಮಹತ್ಯೆಯೋ ಅಥವಾ ಅಚಾನಕ್‌ ಆಗಿದ್ದೋ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net