

ಮುಂಬೈ: ವಿಶ್ವಾಸಮತ ಯಾಚನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದರೊಂದಿಗೆ ಮಹಾ ರಾಜಕೀಯ ಬಿಕ್ಕಟ್ಟಿಗೆ ಬಹುತೇಕ ತೆರೆ ಬಿದ್ದಂತಾಗಿದೆ.
ಸತತ ನಾಲ್ಕುಗಂಟೆಗಳ ಕಾಲ ನಡೆದ ವಾದ- ಪ್ರತಿವಾದದ ಬಳಿಕ ಸುಪ್ರೀಂಕೋರ್ಟ್ ರಾತ್ರಿ 9.15 ರ ಸುಮಾರಿಗೆ ತನ್ನ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ, ಠಾಕ್ರೆ ರಾತ್ರಿ 9:30ಕ್ಕೆ ಫೇಸ್ಬುಕ್ ಲೈವ್ಗೆ ಬಂದು ರಾಜೀನಾಮೆ ಘೋಷಿಸಿದ್ದರು.
ಇದೀಗ ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ತಾವೇ ಕಾರು ಚಾಲನೆ ಮಾಡಿಕೊಂಡು ರಾಜಭವನಕ್ಕೆ ಬಂದ ಠಾಕ್ರೆ ರಾಜ್ಯಪಾಲ ಭಗತ್ಸಿಗ್ ಕೋಶಿಯಾರಿಗೆ ತಮ್ಮ ರಾಜೀನಾಮೆಪತ್ರವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ರಶ್ಮಿ ಮತ್ತು ಮಾಜಿ ಸಚಿವರು ಹಾಜರಿದ್ದರು. ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿರುವುದು ವರದಿಯಾಗಿದೆ. ಆದರೆ ಮುಂದಿನ ವ್ಯವಸ್ಥೆ ಆಗುವವರೆಗೂ ಉಸ್ತುವಾರಿ ನೋಡಿಕೊಳ್ಳುವಂತೆಯೂ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಆದೇಶದ ಪ್ರಕಾರ ಈಗ ವಿಶ್ವಾಸಮತ ಪರೀಕ್ಷೆಯ ಅಗತ್ಯವಿಲ್ಲ, ಆದ್ದರಿಂದ ಇಂದಿನ ವಿಶೇಷ ಅಧಿವೇಶನವನ್ನು ಕರೆಯಲಾಗುವುದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರು, ಎಲ್ಲ ರಾಜ್ಯದ ಶಾಸಕರಿಗೆ ಮಾಹಿತಿ ರವಾನಿಸಿದ್ದಾರೆ.