

ನವದೆಹಲಿ: ಮನೆಯಲ್ಲಿಯೇ ಕೇಕ್ ಅಥವಾ ಇನ್ನಾವುದೇ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡುತ್ತಿರುವಿರಾ? ಹೀಗೆ ಗೃಹ ಮೂಲದ ಉದ್ಯಮ ಮಾಡುವವರು ಪರವಾನಗಿಯನ್ನು ಪಡೆದುಕೊಂಡಿರುವಿರಾ? ಇಲ್ಲವಾದರೆ ನೀವು ಐದು ಲಕ್ಷ ರೂಪಾಯಿವರೆಗೆ ದಂಡ ತೆರಬೇಕಾಗಬಹುದು, ಜತೆಗೆ ಆರು ತಿಂಗಳು ಜೈಲು ಶಿಕ್ಷೆ ಕೂಡ!
ಇದು ಹೊಸ ನಿಯಮವಲ್ಲ. ಬದಲಿಗೆ 2011 ಆಗಸ್ಟ್ 5ರಂದು ಜಾರಿಗೆ ಬಂದಿರುವ ನಿಯಮವಿದು. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ ಕಾನೂನು ಇದು. ಆದರೆ ಈ ನಿಯಮ ಈಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಕರೊನಾ ವೈರಸ್ನ ಈ ದಿನಗಳಲ್ಲಿ ಕೆಲಸ ಕಳೆದುಕೊಂಡಿರುವ ಅನೇಕ ಮಂದಿ ಪರವಾನಗಿ ಪಡೆದುಕೊಳ್ಳದೇ ಆಹಾರಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ.
ಎಷ್ಟೋ ಮಂದಿ ಈಗ ಜೀವನೋಪಾಯಕ್ಕಾಗಿ ಮನೆಯಲ್ಲೇ ಕೇಕ್ ಅಥವಾ ಇನ್ನಿತರ ಆಹಾರಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಬಳಕೆಯಾಗುವ ವಸ್ತುಗಳ ಗುಣಮಟ್ಟದ ಬಗ್ಗೆ ಯಾವುದೇ ಖಾತ್ರಿ ಇಲ್ಲದ ಹಿನ್ನೆಲೆಯಲ್ಲಿ, ಗ್ರಾಹಕರ ಮೇಲೆ ಇದು ಗಂಭೀರ ಪರಿಣಾಮ ಉಂಟಾಗಬಹುದು ಎನ್ನುವ ಕಾರಣಕ್ಕೆ ಇಂಥದ್ದೊಂದು ನಿಯಮವನ್ನು 2011ರಿಂದಲೇ ಜಾರಿಗೆ ತರಲಾಗಿದೆ.
ಇದನ್ನೂ ಓದಿ: ಈ ಏಡಿ ಅಪ್ಪಿತಪ್ಪಿ ತಲೆಯ ಮೇಲೆ ಬಿದ್ದರೆ ಅಷ್ಟೇ..!
ಭಾರತದ ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರದ ನಿರ್ದೇಶನದಂತೆ ಇಂತಹ ಆಹಾರ ತಯಾರಿ ಘಟಕಗಳಿಗೆ ರಾಜ್ಯ ಆಹಾರ ಸುರಕ್ಷಾ ಇಲಾಖೆ ಪರವಾನಿಗೆ ನೀಡುತ್ತಿದೆ. ಕರೊನಾ ಆರಂಭವಾದ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ 2,300 ಗೃಹ ಮೂಲದ ಉದ್ಯಮಗಳು ನೋಂದಣಿ ಮಾಡಿಕೊಂಡಿವೆ. ಆದರೆ ಎಷ್ಟೋ ಮಂದಿ ಇದರ ಅರಿವಿಲ್ಲದೇ ಅಥವಾ ಅರಿವು ಇದ್ದರೂ ತಮಗೇನೂ ಆಗುವುದಿಲ್ಲ ಎನ್ನುವ ಕಾರಣಕ್ಕೆ ಪರವಾನಗಿ ಪಡೆದುಕೊಂಡಿಲ್ಲ.
ಇಂಥವರ ವಿರುದ್ಧ ಈಗ ಪ್ರಾಧಿಕಾರ ಕಣ್ಣು ಇಟ್ಟಿದೆ. 12 ಲಕ್ಷ ರೂಪಾಯಿಗಿಂದ ಮೇಲ್ಪಟ್ಟ ವ್ಯವಹಾರಗಳಿಗೆ ಪರವಾನಿಗೆ ಅಗತ್ಯವಾಗಿದ್ದರೆ, ಈ ಮೊತ್ತಕ್ಕಿಂತ ಕಡಿಮೆ ವ್ಯವಹಾರ ಇರುವ ಘಟಕಕ್ಕೆ ನೋಂದಣಿ ಅತ್ಯಗತ್ಯ. ಇಲ್ಲದೇ ಹೋದರೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ. ಎಲ್ಲವೂ ಚೆನ್ನಾಗಿದ್ದರೆ ಓಕೆ. ಒಂದು ವೇಳೆ ಏನಾದರೂ ಸಮಸ್ಯೆ ಆದಲ್ಲಿ, ನಿಮ್ಮ ವಿರುದ್ಧ ದೂರು ಬಂದಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಒಂದು ವೇಳೆ ಆಹಾರ ಸುರಕ್ಷಾ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದಾಗ ಪರವಾನಗಿ ಪಡೆಯಲಿಲ್ಲ ಎಂದು ಗೊತ್ತಾದರೆ ದಂಡ ಮತ್ತು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ಹೇಗೆ ನೋಂದಣಿ?
ನೋಂದಣಿ ಪ್ರಕ್ರಿಯ ತುಂಬಾ ಸರಳವಾಗಿದೆ ಎಂದು ಪ್ರಾಧಿಕಾರ ಹೇಳಿದೆ. ಭಾರತದ ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರದಲ್ಲಿ ನೋಂದಣಿಯನ್ನು ಮಾಡಿಕೊಳ್ಳಬಹುದು. ಫೋಟೋ ಇರುವ ಯಾವುದಾದರೂ ಗುರುತಿನ ಚೀಟಿ ಹಾಗೂ ಫೋಟೋವನ್ನು ಅಪ್ಲೋಡ್ ಮಾಡುವ ಮೂಲಕ ನೋಂದಣಿ ಪೂರ್ಣಗೊಳಿಸಬಹುದು.
ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ: https://fssaifoodlicense.in/food-license-for-homemade-food/
ಆಹಾರ ಪದಾರ್ಥ ತಯಾರಿಕೆಗೆ ಬಳಸುವ ನೀರು ಹಾಗೂ ಉತ್ಪನ್ನಗಳ ಗುಣಮಟ್ಟಕ್ಕೆ ಉತ್ಪಾದಕರು ಜವಾಬ್ದಾರಿ. ಪರವಾನಿಗೆ ಹಾಗೂ ನೋಂದಣಿಯನ್ನು ಆಹಾರ ಸುರಕ್ಷಾ ಇಲಾಖೆಯ ಜಿಲ್ಲಾ ಕಚೇರಿ ನೀಡುತ್ತದೆ.