ನನ್ನ ಪತ್ನಿಗೆ ವಾರ್ನಿಂಗ್‌ ಕೊಟ್ಟು ಹೇಗೆ ಸರಿದಾರಿಗೆ ತರುವುದು ಮೇಡಂ?

nandondu kathe
Published on
ನಾನು ಬೆಂಗಳೂರಿನಲ್ಲಿ ನನ್ನ ಹೆಂಡತಿ ಮತ್ತೆ ಮಗು ಜೊತೆಗೆ ವಾಸ ಮಾಡ್ತಾ ಇದ್ದೀನಿ . ನನ್ನ ಪ್ರಾಬ್ಲಮ್ ಏನಂದ್ರೆ ನನ್ನ ಹೆಂಡತಿ ನಾನು ಮನೆಯಲ್ಲಿ ಇಲ್ಲದಾಗ ಬೇರೆ ಹುಡುಗರ ಜೊತೆ ಸಂಬಂಧ ಬೆಳೆಸಿದ್ದಾಳೆ. ನಾನು ಕೂಡ 3 ಸರ್ತಿ ಅವಳ ಮನೆಯಲ್ಲಿ ವಿಷಯ ತಿಳಿಸಿ ವಾರ್ನಿಂಗ್ ಕೊಟ್ಟು ಮತ್ತೆ ಬೆಂಗಳೂರಿಗೇ ಕರೆದುಕೊಂಡು ಬಂದೆ ಆದರೆ ಅವಳು ಮತ್ತೆ ಅದೇ ಥರ ಮಾಡ್ತಾ ಇದ್ದಾಳೆ.

ಈ ಸಲ ನಾನು ಅವಳನ್ನ ಅವಳ ಮನೆಗೆ ಕಳಿಸಿದ್ದೇನೆ ವಾಪಾಸ್ ಕರೆದುಕೊಂಡು ಬಂದಿಲ್ಲ. ನನಗೆ ಒಂದು ಗಂಡು ಮಗು ಇದೆ. ದಯವಿಟ್ಟು ನನಗೆ ಸಲಹೆ ಕೊಡಿ ನಾನು ಈ ಸರಿ ಅವಳನ್ನ ವಾಪಾಸ್ ಕರ್ಕೊಂಡು ಬರಬೇಕೆಂದರೆ ಏನು ಕಂಡೀಶನ್ ಹಾಕಿ ಕರೆದುಕೊಂಡು ಬರಬಹುದು ಮತ್ತೆ ನಿಮ್ಮ ಕಡೆಯಿಂದ ಏನಾದರೂ ವಾರ್ನಿಂಗ್‌ ಕೊಟ್ಟು ಅವಳನ್ನ ಭಯ ಪಡಿಸಬಹುದಾ? ದಯವಿಟ್ಟು ನನಗೆ ಸಲಹೆ ಕೊಡಿ.

ಉತ್ತರ: ನಮ್ಮ ಕಡೆಯಿಂದ ವಾರ್ನಿಂಗ್‌ ಕೊಡಲೂ ಆಗುವುದಿಲ್ಲ. ಕೊಡುವುದೂ ಇಲ್ಲ. ನೀವು ನಿಮ್ಮ ಪತ್ನಿ ಇರುವ ತಾಲ್ಲೂಕಿನ ನ್ಯಾಯಾಲಯದಲ್ಲಿ ಇರುವ ಮಧ್ಯಸ್ಥಿಕೆಕೇಂದ್ರದಲ್ಲಿ, ಅಥವಾ ಬೆಂಗಳೂರಿನಲ್ಲಿ ಇರುವುದಾದರೆ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರಕ್ಕೆ , ನಿಮ್ಮ ಮತ್ತು ನಿಮ್ಮ ಪತ್ನಿಯ ಮಧ್ಯೆ ಕೆಲವು ದಾಂಪತ್ಯದ ಸಮಸ್ಯೆಗಳು ಇವೆ, ಅವನ್ನು ಪರಿಹರಿಸಿಕೊಡಲು ಸಹಾಯ ಮಾಡಿಕೊಡಿ ಎಂದು ಅರ್ಜಿ ಕೊಡಿ. ಬೇರೆ ಯಾವ ವಿವರವನ್ನೂ ಕೊಡಬೇಕಾಗಿಲ್ಲ.

ನಿಮ್ಮ ಪತ್ನಿಯ ಮತ್ತು ನಿಮ್ಮ ವಿಳಾಸ, ಮೊಬೈಲ್‌ ಸಂಖ್ಯೆ ವಿವರಗಳನ್ನು ಕೊಡಿ. ಕೇಂದ್ರದವರು ಇಬ್ಬರನ್ನೂ ಕರೆಯಿಸಿ, ನುರಿತ ಮಧ್ಯಸ್ಥಿಕೆಗಾರರ ಸಹಾಯದಿಂದ ನಿಮ್ಮಿಬ್ಬರ ನಡುವೆ ಮಧ್ಯೆ ಮಧ್ಯಸ್ಥಿಕೆ ಮಾಡುತ್ತಾರೆ. ಅಲ್ಲಿ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಬಹುದು. ಆ ನಂತರವೂ ಪ್ರಯೋಜನ ಆಗದೇ ಹೋದರೆ ಆಗ ವಿಚ್ಛೇದನಕ್ಕೆ ಕಾನೂನು ಕ್ರಮ ಜರಗಿಸ ಬಹುದು. ಕೇವಲ ಸಂಶಯದ ಆಧಾರದ ಮೇಲೆ ದಾಂಪತ್ಯ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಒಂದು ಮಗುವೂ ಇದೆ ಎನ್ನುವುದನ್ನು ಮರೆಯಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net